ಮದ್ಯಪ್ರದೇಶ | ಗಂಟಲು ಸೀಳಿ ಕಸದ ತೊಟ್ಟಿಯಲ್ಲಿ ಎಸೆದಿದ್ದ ನವಜಾತ ಶಿಶು ಆಸ್ಪತ್ರೆಯಲ್ಲಿ ಒಂದು ತಿಂಗಳ ನಂತರ ಚೇತರಿಕೆ
ಹೆಣ್ಣು ಮಗುವಾಗಿದ್ದಕ್ಕೆ ಕಸದ ತೊಟ್ಟಿಗೆ ಎಸೆದಿದ್ದ ಮಹಿಳೆ!

ಸಾಂದರ್ಭಿಕ ಚಿತ್ರ (PTI)
ಭೋಪಾಲ್: ಗಂಟಲು ಸೀಳಿ ಕಸದ ತೊಟ್ಟಿಯಲ್ಲಿ ಎಸೆದಿದ್ದ ನವಜಾತ ಶಿಶುವೊಂದು ಆಸ್ಪತ್ರೆಯಲ್ಲಿ ಒಂದು ತಿಂಗಳ ನಂತರ ಭೋಪಾಲ್ ನ ಕಮಲಾ ನೆಹರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದೆ.
ಹೆಣ್ಣು ಮಗು ಹುಟ್ಟಿದ್ದಕ್ಕೆ ಮಗುವಿನ ಅಜ್ಜಿ ಗಂಟಲು ಸೀಳಿ ಮಧ್ಯಪ್ರದೇಶದ ರಾಜ್ಗಢ ಪಟ್ಟಣದಲ್ಲಿರುವ ಕಸದ ತೊಟ್ಟಿಯಲ್ಲಿ ಎಸೆದಿದ್ದಳು ಎನ್ನಲಾಗಿದೆ. ಘಟನೆಯ ಸಂಬಂಧ ಮಗುವಿನ ತಾಯಿ ಮತ್ತು ಅಜ್ಜಿಯನ್ನು ಬಂಧಿಸಲಾಗಿದ್ದು, ಕೊಲೆ ಯತ್ನ ಮತ್ತು ಕಸದ ತೊಟ್ಟಿಯಲ್ಲಿ ಎಸೆದ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 11 ರಂದು, ಭೋಪಾಲ್ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ರಾಜ್ಗಢ ಜಿಲ್ಲೆಯ ಕಸದ ತೊಟ್ಟಿಯಲ್ಲಿ ದಾರಿಹೋಕರು ನವಜಾತ ಶಿಶುವನ್ನು ಕಂಡಿದ್ದರು. ಮಗುವಿನ ಸೀಳಿದ ಗಂಟಲಿನಿಂದ ರಕ್ತ ಇನ್ನೂ ಸುರಿಯುತ್ತಿತ್ತು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ನಂತರ ಅದನ್ನು ಭೋಪಾಲ್ಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಭೋಪಾಲ್ನ ಕಮಲಾ ನೆಹರು ಆಸ್ಪತ್ರೆಯ ವೈದ್ಯರು ಮತ್ತು ದಾದಿಯರ ಅವಿರತ ಪ್ರಯತ್ನದಿಂದ ಹೆಣ್ಣು ಮಗು ಬದುಕುಳಿದಿದೆ. ಮಗುವಿನ ಕುತ್ತಿಗೆಯಲ್ಲಿನ ಗಾಯವು ಆಳವಾಗಿತ್ತು. ಪ್ರಮುಖ ರಕ್ತನಾಳಗಳು ಮತ್ತು ಅಪಧಮನಿಗಳು ತಪ್ಪಿದ್ದವು. ವೈದ್ಯರು ಮಗುವಿನ ಗಾಯಗಳಿಗೆ ಹೊಲಿಗೆ ಹಾಕಿ, ಹಲವಾರು ಶಸ್ತ್ರಚಿಕಿತ್ಸೆಗಳ ಮೂಲಕ ರಕ್ತನಾಳಗಳನ್ನು ಸರಿಪಡಿಸಿದರು. ಕಳೆದ ಒಂದು ತಿಂಗಳಿನಿಂದ, ಪುಟ್ಟ ಮಗುವನ್ನು ಒಂದು ಕ್ಷಣವೂ ವೈದ್ಯರು ಒಂಟಿಯಾಗಿ ಬಿಡಲಿಲ್ಲ. ಪವಾಡಸದೃಶವಾಗಿ ಮಗು ಈಗ ಬದುಕುಳಿದಿದೆ, ಚೇತರಿಸಿಕೊಂಡಿದೆ.
ಒಂದು ತಿಂಗಳ ನಂತರ, ವೈದ್ಯರು ಮಗು ಅಪಾಯದಿಂದ ಪಾರಾಗಿದೆ ಎಂದು ಘೋಷಿಸಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ಈ ಸಂತಸದ ಕ್ಷಣಕ್ಕೆ ಮಗುವಿಗೆ ನಾಮಕರಣ ಕೂಡ ಮಾಡಲಾಗಿದೆ. ಅದಕ್ಕೆ ಪಿಹು ಎಂದು ಹೆಸರಿಡಲಾಗಿದೆ. ಅವಳು ಅಳುವಾಗ, ಅದು ಅವರ ಕಿವಿಗಳಿಗೆ ಸಂಗೀತದಂತೆ ಭಾಸವಾಗುತ್ತಿದ್ದರಿಂದ ಪಿಹು ಹೆಸರಿಡಲಾಗಿದೆ. ಪುಟ್ಟ ಮಗುವನ್ನು ತೊಟ್ಟಿಲಿನಲ್ಲಿಟ್ಟು ಅದಕ್ಕೆ ಹೊಸ ಜನ್ಮ ದಿನ ಎಂದು ಆಚರಿಸಿ ವೈದ್ಯರು ಖುಷಿ ಪಟ್ಟಿದ್ದಾರೆ.
"ಮಗುವಿನ ಚೇತರಿಕೆಯು, ನಮಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಆಕೆಗೆ ತೀವ್ರ ಗಾಯಗಳಾಗಿದ್ದವು. ಮಗು ಬದುಕುಳಿಯಿತು. ನಾವು ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿಯ ಅನುಮತಿಯೊಂದಿಗೆ ರಾಜ್ಗಢದಲ್ಲಿರುವ ಆಶ್ರಯ ಗೃಹಕ್ಕೆ ಹಸ್ತಾಂತರಿಸಿದ್ದೇವೆ", ಎಂದು ಕಮಲಾ ನೆಹರು ಆಸ್ಪತ್ರೆಯ ಮುಖ್ಯಸ್ಥ ಡಾ. ಧೀರೇಂದ್ರ ಶ್ರೀವಾಸ್ತವ್ ಹೇಳಿದರು.
"ಕಳೆದ ಕೆಲವು ತಿಂಗಳುಗಳಲ್ಲಿ ಇದು ಮೂರನೇ ಇಂತಹ ಪ್ರಕರಣ. ನಾವು ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಖುಷಿ ಮತ್ತು ಈ ಶಿಶುವಿಗೆ ಪಿಹು ಎಂದು ಹೆಸರಿಸಿದ್ದೇವೆ", ಎಂದು ಅವರು ವಿವರಿಸಿದರು.
ಕಳೆದ ನಾಲ್ಕು ವರ್ಷಗಳಿಂದ, ಮಧ್ಯಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಶಿಶುಗಳನ್ನು ತೊರೆದಿರುವ ಪ್ರಕರಣಗಳನ್ನು ದಾಖಲಿಸಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಪ್ರತಿ ಎರಡು ದಿನಕ್ಕೆ ಕನಿಷ್ಠ ಒಂದು ಶಿಶುವನ್ನು ಎಸೆದಿರುವ ಪ್ರಕರಣಗಳು ವರದಿಯಾಗಿವೆ.
ಹೆಚ್ಚಿನ ನವಜಾತ ಶಿಶುಗಳು ಮೃತಪಟ್ಟಿದ್ದು, ಕೆಲವನ್ನು ನಾಯಿಗಳು ಮತ್ತು ಕಾಡು ಪ್ರಾಣಿಗಳು ತಿನ್ನುತ್ತವೆ. ಇತರ ನವಜಾತ ಶಿಶುಗಳು ಹವಾಮಾನಕ್ಕೆ ಒಗ್ಗಿಕೊಳ್ಳದೇ ಮೃತಪಟ್ಟಿವೆ . 2022 ರ ಎನ್ಸಿಆರ್ಬಿ ವರದಿಯ ಪ್ರಕಾರ, ಮಧ್ಯಪ್ರದೇಶದಲ್ಲಿ 175 ನವಜಾತ ಶಿಶುಗಳನ್ನು ಜನನದ ನಂತರ ತೊರೆಯಲಾಗಿದೆ ಅಥವಾ ಪೊದೆಗಳಿಗೆ ಎಸೆಯಲಾಗಿದೆ. ಈ ಕುರಿತು 174 ಪ್ರಕರಣಗಳು ದಾಖಲಾಗಿವೆ. ಇದು ದೇಶದಲ್ಲಿಯೇ ಅತೀ ಹೆಚ್ಚು.