ಉತ್ತರ ಪ್ರದೇಶ | ಗೀಸರ್ ಸ್ಫೋಟಗೊಂಡು ನವವಿವಾಹಿತ ಮಹಿಳೆ ಮೃತ್ಯು
ಸಾಂದರ್ಭಿಕ ಚಿತ್ರ (credit: smartprix.com)
ಬರೇಲಿ: ಸ್ನಾನ ಮಾಡುವಾಗ ಗೀಸರ್ ಸ್ಫೋಟಗೊಂಡು ನವವಿವಾಹಿತ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬರೇಲಿಯಲ್ಲಿ ನಡೆದಿದೆ. ಬುಲಂದ್ ಶಹರ್ ನ ನಿವಾಸಿಯಾದ ಮೃತ ಮಹಿಳೆಗೆ ನವೆಂಬರ್ 22ರಂದಷ್ಟೆ ವಿವಾಹವಾಗಿತ್ತು. ವಿವಾಹವಾದ ಕೇವಲ ಐದೇ ದಿನಗಳಲ್ಲಿ ಆಕೆ ತನ್ನ ಮಾವನ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯ ನಂತರವಷ್ಟೆ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಬುಲಂದ್ ಶಹರ್ ನ ಕಾಲೆ ಕ ನಗ್ಲಾ ಗ್ರಾಮದ ನಿವಾಸಿ ಸೂರಜ್ ಪಾಲ್ ಎಂಬವರ ಪುತ್ರಿಯಾದ ದಾಮಿನಿ ಹಾಗೂ ಬರೇಲಿಯ ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪಲ್ಸನ ಚೌಧರಿ ಗ್ರಾಮದ ನಿವಾಸಿ ದೀಪಕ್ ಯಾದವ್ ನಡುವೆ ನವೆಂಬರ್ 22ರಂದು ವಿವಾಹ ನಡೆದಿತ್ತು.
ಬುಧವಾರ ಎಂದಿನಂತೆ ಸ್ನಾನ ಮಾಡಲು ಸ್ನಾನ ಗೃಹಕ್ಕೆ ತೆರಳಿದ್ದ ದಾಮಿನಿ ಹೊರಗೆ ಬರದಿದ್ದಕ್ಕೆ ಪತಿ ದೀಪಕ್ ಆಕೆಯನ್ನು ಹಲವಾರು ಬಾರಿ ಕೂಗಿ ಕರೆದರೂ, ದಾಮಿನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಸ್ನಾನ ಗೃಹದ ಬಾಗಿಲನ್ನೂ ತೆರೆದಿಲ್ಲ ಎನ್ನಲಾಗಿದೆ.
ದಾಮಿನಿ ಬಾಗಿಲು ತೆರೆಯದೆ ಇದ್ದುದರಿಂದ ಇಡೀ ಕುಟುಂಬ ಕಳವಳಕ್ಕೀಡಾಗಿದೆ. ಅವರು ಪದೇ ಪದೇ ಆಕೆಯನ್ನು ಕೂಗಿ ಕರೆದರೂ, ಬಾಗಿಲು ಮಾತ್ರ ತೆರೆದಿಲ್ಲ. ಏನೋ ಅನಾಹುತವಾಗಿದೆ ಎಂದು ಭಯಭೀತಗೊಂಡಿರುವ ಕುಟುಂಬದ ಸದಸ್ಯರು ಸ್ನಾನ ಗೃಹದ ಬಾಗಿಲನ್ನು ಮುರಿದಿದ್ದಾರೆ. ಒಳಕ್ಕೆ ಹೊಕ್ಕಾಗ, ದಾಮಿನಿ ನೆಲದ ಮೇಲೆ ಪ್ರಜ್ಞಾಹೀನರಾಗಿ ಬಿದ್ದಿರುವುದು ಹಾಗೂ ಗೀಸರ್ ಸ್ಫೋಟಗೊಂಡಿರುವುದು ಕಂಡು ಬಂದಿದೆ. ಕೂಡಲೇ ದಾಮಿನಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.