ಹೊಸಮನೆ ನಿರ್ಮಿಸಲು ಹಣಕ್ಕಾಗಿ ಬಾಲಕನ ಅಪಹರಿಸಿ ಹತ್ಯೆಗೈದ ಟೈಲರ್
ಥಾಣೆ: ರವಿವಾರ ಸಂಜೆ ಸ್ಥಳೀಯ ಮಸೀದಿಯಲ್ಲಿ ನಮಾಝ್ ಮುಗಿಸಿ ಹೊರಬಿದ್ದಿದ್ದ ಒಂಭತ್ತರ ಹರೆಯದ ಬಾಲಕನನ್ನು ಸ್ಥಳೀಯ ಟೈಲರ್ನೋರ್ವ ಅಪಹರಿಸಿ, ಹತ್ಯೆಗೈದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರನಾಥ ತಾಲೂಕಿನ ಬದ್ಲಾಪುರ ಸಮೀಪದ ಗೋರೆಗಾಂವ ಗ್ರಾಮದಲ್ಲಿ ನಡೆದಿದೆ. ಆರೋಪಿಯು ಬಾಲಕನ ಮೃತದೇಹವನ್ನು ಚೀಲದಲ್ಲಿ ತುಂಬಿಸಿ ತನ್ನ ಮನೆಯ ಹಿತ್ತಿಲಲ್ಲಿ ಬಚ್ಚಿಟ್ಟಿದ್ದ ಎಂದು ವರದಿಯಾಗಿದೆ.
ಆರೋಪಿ ಸಲ್ಮಾನ್ ಮೌಲ್ವಿಗೆ ಹೊಸಮನೆಯನ್ನು ನಿರ್ಮಿಸಲು ಹಣದ ಅಗತ್ಯವಿತ್ತು. ಹೀಗಾಗಿ ಆತ ರವಿವಾರ ಸಂಜೆ ಮಸೀದಿಯಿಂದ ಹೊರಬರುತ್ತಿದ್ದ ಬಾಲಕ ಇಬಾದ್ ನನ್ನು ಅಪಹರಿಸಿದ್ದ. ಇಬಾದ್ ಮನೆಗೆ ಮರಳದಿದ್ದಾಗ ಕುಟುಂಬದವರೊಂದಿಗೆ ಸೇರಿಕೊಂಡು ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದರು. ಪೋಲಿಸರೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ನಡುವೆ ಬಾಲಕನ ತಂದೆ ಮುದಸ್ಸಿರ್ ಗೆ ಕರೆ ಮಾಡಿ 23 ಲಕ್ಷ ರೂ.ಗಳ ಒತ್ತೆಹಣಕ್ಕೆ ಸಲ್ಮಾನ್ ಯಾವುದೇ ವಿವರಗಳನ್ನು ನೀಡದೇ ಅವಸರದಿಂದ ಕರೆಯನ್ನು ಅಂತ್ಯಗೊಳಿಸಿದ್ದ.
ಬಾಲಕನಿಗಾಗಿ ಶೋಧ ತೀವ್ರಗೊಂಡಾಗ ಸಲ್ಮಾನ್ ತನ್ನ ಮೊಬೈಲ್ ನ ಸಿಮ್ ಕಾರ್ಡ್ ಬದಲಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಕೊನೆಗೂ ಸೋಮವಾರ ಮಧ್ಯಾಹ್ನ ಆತನ ಮನೆಯನ್ನು ಗುರುತಿಸುವಲ್ಲಿ ಸಫಲರಾದ ಪೋಲಿಸರು ಚೀಲದಲ್ಲಿ ತುಂಬಿಟ್ಟಿದ್ದ ಇಬಾದ್ ನ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.
ಪ್ರಮುಖ ಆರೋಪಿ ಮೌಲ್ವಿಯ ಜೊತೆಗೆ ಆತನ ಸೋದರ ಸಫ್ವಾನ್ ಮೌಲ್ವಿಯನ್ನೂ ಪೋಲಿಸರು ಬಂಧಿಸಿದ್ದಾರೆ.