ಭಾರತೀಯರ ಸಂಪತ್ತು ಕ್ರೋನಿ ಕಾರ್ಪೊರೇಟ್ ಗಳ ಪಾಲಾಗುವುದನ್ನು ನಿಲ್ಲಿಸುತ್ತೇವೆ: ಕಾಂಗ್ರೆಸ್
ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ: ಮೋದಿ ಸರಕಾರವು ಸಾಮಾನ್ಯ ಭಾರತೀಯರ ಸಂಪತ್ತು ಕ್ರೋನಿ ಕಾರ್ಪೊರೇಟ್ (ಉದ್ಯಮಿ ಮಿತ್ರರು)ಗಳ ಪಾಲಾಗಲು ನೆರವಾಗುತ್ತಿದೆ ಎಂದು ಗುರುವಾರ ಆರೋಪಿಸಿರುವ ಕಾಂಗ್ರೆಸ್, ತಾನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇದನ್ನು ಕೊನೆಗೊಳಿಸುವುದಾಗಿ ಹೇಳಿದೆ.
ರಾಹುಲ್ ಗಾಂಧಿಯವರು ಅದಾನಿ ಮತ್ತು ಅಂಬಾನಿಯವರನ್ನು ನಿಂದಿಸುವುದನ್ನು ನಿಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರ ಪಕ್ಷವು ಈ ಉದ್ಯಮಿಗಳಿಂದ ಹಣವನ್ನು ಪಡೆದಿದೆಯೇ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಪ್ರಶ್ನಿಸಿದ ಬೆನ್ನಿಗೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಅವರು,‘ಜೂ.4ರಂದು ಕಾಂಗ್ರೆಸ್ ನೇತೃತ್ವದ ಸರಕಾರವು ಅಧಿಕಾರ ಸ್ವೀಕರಿಸುತ್ತಿದ್ದಂತೆ ನಾವು ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸುತ್ತೇವೆ ಮತ್ತು ಸಾಮಾನ್ಯ ಭಾರತೀಯ ಕುಟುಂಬಗಳು ಅತಿ ದೊಡ್ಡ ಫಲಾನುಭವಿಗಳಾಗುವಂತೆ ನೋಡಿಕೊಳ್ಳುತ್ತೇವೆ. ಸಂಪತ್ತು ಭಾರತೀಯ ಕುಟುಂಬಗಳಿಂದ ಕ್ರೋನಿ ಕಾರ್ಪೊರೇಟ್ಗಳಿಗೆ ಹರಿದುಹೋಗುವುದನ್ನು ಅಂತ್ಯಗೊಳಿಸುತ್ತೇವೆ ’ಎಂದು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಕಳೆದ ಮೂರು ವರ್ಷಗಳಲ್ಲಿ ನಿವ್ವಳ ಕೌಟುಂಬಿಕ ಉಳಿತಾಯ ಒಂಭತ್ತು ಲಕ್ಷ ಕೋಟಿ ರೂ.ಗಳಷ್ಟು ಕುಸಿದಿದೆ. 2014ರಿಂದಲೂ ನೈಜ ಕೌಟುಂಬಿಕ ಉಳಿತಾಯಗಳು ಕನಿಷ್ಠ ಮಟ್ಟವನ್ನು ತಲುಪಿವೆ. ಪ್ರಧಾನಿ ಮೋದಿಯವರು ಸಂಪತ್ತು ಭಾರತ ಕೆ ಪರಿವಾರ್ ನಿಂದ ಮೋದಿ ಕಾ ಪರಿವಾರ್ ಗೆ ಹರಿದುಹೋಗುವಂತೆ ನೋಡಿಕೊಂಡಿದ್ದಾರೆ ’ ಎಂದು ತನ್ನ ಹೇಳಿಕೆಯನ್ನು ಹಂಚಿಕೊಂಡಿರುವ ಎಕ್ಸ್ ಪೋಸ್ಟ್ ನಲ್ಲಿ ರಮೇಶ್ ಹೇಳಿದ್ದಾರೆ.
‘150 ವರ್ಷಗಳ ಹಿಂದೆ ದಾದಾಭಾಯಿ ನವರೋಜಿಯವರು ತನ್ನ ‘ಡ್ರೈನ್ ಥಿಯರಿ’ಯಲ್ಲಿ ಹೇಗೆ ಭಾರತದ ಸಂಪತ್ತನ್ನು ಕಿತ್ತುಕೊಂಡು ಇಂಗ್ಲಂಡ್ಗೆ ರವಾನಿಸಲಾಗುತ್ತಿದೆ ಎನ್ನುವುದನ್ನು ವಿವರಿಸಿದ್ದರು. 2014ರಿಂದ ಭಾರತ ಕೆ ಪರಿವಾರ್ದಿಂದ ಮೋದಿ ಕಾ ಪರಿವಾರ್ಗೆ ಇಂತಹುದೇ ಸಂಪತ್ತಿನ ಹರಿಯುವಿಕೆಯನ್ನು ನಾವು ನೋಡಿದ್ದೇವೆ. ಇದು ತನ್ನ ಉದ್ಯಮಿ ಮಿತ್ರರಿಗೆ ನೆರವಾಗುವ ಪ್ರಧಾನಿಯವರ ‘ಹಮ್ ದೋ ಹಮಾರೆ ದೋ (ನಾವಿಬ್ಬರು ನಮಗಿಬ್ಬರು)’ ನೀತಿಯ ಉದ್ದೇಶಪೂರ್ವಕ ಪರಿಣಾಮವಾಗಿದೆ’ ಎಂದು ಹೇಳಿರುವ ರಮೇಶ,ಮೋದಿಯವರ ಅನ್ಯಾಯ ಕಾಲದಲ್ಲಿ ಪ್ರತಿದಿನವೂ ಕಳೆಯುತ್ತಿದ್ದಂತೆ ಈ ‘ಸಂಪತ್ತಿನ ಹರಿವು’ ಲಜ್ಜೆಗೇಡಿತನದ ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ಮೇ 7ರಂದು ಬಿಡುಗಡೆಗೊಂಡಿರುವ ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳು ಭಾರತದ ನಿವ್ವಳ ಕೌಟುಂಬಿಕ ಉಳಿತಾಯವು ಒಂಭತ್ತು ಲ.ಕೋ.ರೂ.ಗಳಷ್ಟು ಕುಸಿದಿದೆ ಎನ್ನುವುದನ್ನು ತೋರಿಸಿದೆ ’ಎಂದಿದ್ದಾರೆ.
ಮೋದಿ ಸರಕಾರದ ಆರ್ಥಿಕ ದುರಾಡಳಿತ,ಅಸಮರ್ಥತೆ ಮತ್ತು ಜನವಿರೋಧಿ ನೀತಿಗಳಿಂದಾಗಿ ಭಾರತೀಯ ಕುಟುಂಬಗಳು ತಮ್ಮ ಉಳಿತಾಯಗಳನ್ನು ಖಾಲಿ ಮಾಡಿಕೊಳ್ಳುತ್ತಿವೆ ಮತ್ತು ಸಾಲದ ಸುಳಿಯಲ್ಲಿ ಸಿಲುಕುತ್ತಿವೆ ಎಂದು ಆರೋಪಿಸಿರುವ ರಮೇಶ,ಕಳೆದ ಮೂರು ವರ್ಷಗಳಲ್ಲಿ ಕೌಟುಂಬಿಕ ಸಾಲಗಳ ಮೊತ್ತ ಏಳು ಲ.ಕೋ.ಗಳಿಂದ 14 ಲ.ಕೋ.ರೂ.ಗಳಿಗೆ ಏರಿಕೆಯಾಗಿದೆ ಎಂದು ಬೆಟ್ಟು ಮಾಡಿದ್ದಾರೆ.
ಸೆಪ್ಟೆಂಬರ್ 2023ರ ಆರ್ಬಿಐ ಬುಲೆಟಿನ್ ಭಾರತದ ನಿವ್ವಳ ಆರ್ಥಿಕ ಉಳಿತಾಯ ಜಿಡಿಪಿಯ ಕೇವಲ ಶೇ.5.1ರಷ್ಟಿದೆ ಎನ್ನುವುದನ್ನು ತೋರಿಸಿದೆ,ಇದು 47 ವರ್ಷಗಳಲ್ಲಿಯೇ ಕನಿಷ್ಠವಾಗಿದೆ ಎಂದಿರುವ ರಮೇಶ,ನಿಜವಾದ ಅರ್ಥದಲ್ಲಿ,ಬಿಜೆಪಿ ಸರಕಾರವು ಭಾರತೀಯ ಮಹಿಳೆಯರ ಮಂಗಳಸೂತ್ರಗಳನ್ನು ಕಿತ್ತುಕೊಳ್ಳುತ್ತಿದೆ,ಅದರ ಆರ್ಥಿಕ ವೈಫಲ್ಯಗಳಿಂದಾಗಿ ಚಿನ್ನಾಭರಣಗಳ ಮೇಲಿನ ಸಾಲಗಳು ದಾಖಲೆಯ ಎತ್ತರಕ್ಕೇರಿವೆ. ಆರ್ಬಿಐ ದತ್ತಾಂಶಗಳಂತೆ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಕಿಯುಳಿದಿರುವ ಚಿನ್ನಾಭರಣ ಸಾಲಗಳ ಮೊತ್ತ ಒಂದು ಲ.ಕೋ.ರೂ.ಗಳನ್ನು ದಾಟಿದೆ ಎಂದು ಹೇಳಿದ್ದಾರೆ.
2014ರಿಂದ ಏನಾದರೂ ಬೆಳವಣಿಗೆಯಾಗಿದ್ದರೆ ಅದು ಪ್ರಧಾನಿಗಳ ಕೈಗಾರಿಕೋದ್ಯಮಿ ಮಿತ್ರರದು ಮಾತ್ರ. ಇಂದು 21 ಬಿಲಿಯಾಧೀಶರು ಅತ್ಯಂತ ಬಡತನದಲ್ಲಿರುವ 70 ಕೋ.ಭಾರತೀಯರ ಒಟ್ಟು ಸಂಪತ್ತಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ ಎಂದು ರಮೇಶ ತಿಳಿಸಿದ್ದಾರೆ.