ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿ ಎಸ್ಸಿ- ಎಸ್ಟಿ, ಒಬಿಸಿಗಳಿಗೆ ನೀಡಲಾಗುವುದು: ಅಮಿತ್ ಶಾ
Photo: twitter/AmitShah
ಹೈದರಾಬಾದ್ : ಬಿಜೆಪಿಯು ಅಧಿಕಾರಕ್ಕೆ ಬಂದರೆ ಅದು ಎಸ್ಸಿ - ಎಸ್ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ಹೆಚ್ಚಿಸಲಿದೆ ಹಾಗೂ ಮುಸ್ಲಿಮ್ ಮೀಸಲಾತಿಗಳನ್ನು ಅಂತ್ಯಗೊಳಿಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುರುವಾರ ಹೇಳಿದರು.
ತೆಲಂಗಾಣದ ಭೋಂಗಿರ್ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಶಾ, ಕಾಂಗ್ರೆಸ್ ಸುಳ್ಳುಗಳನ್ನು ಹೇಳುತ್ತ ಚುನಾವಣೆಗಳಲ್ಲಿ ಹೋರಾಡಲು ಬಯಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಅಂತ್ಯಗೊಳಿಸುತ್ತಾರೆ ಎಂದು ಅದು ಹೇಳುತ್ತಿದೆ. ಮೋದಿಯವರು ಈ ದೇಶವನ್ನು ಕಳೆದ ಹತ್ತು ವರ್ಷಗಳಿಂದ ಸರ್ವಾನುಮತದಿಂದ ಮುನ್ನಡೆಸುತ್ತಿದ್ದಾರೆ,ಆದರೆ ಅವರು ಮೀಸಲಾತಿಯನ್ನು ಅಂತ್ಯಗೊಳಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ನೀಡುವ ಮೂಲಕ ಎಸ್ಸಿ-ಎಸ್ಟಿಗಳು ಮತ್ತು ಒಬಿಸಿಗಳ ಕೋಟಾಗಳನ್ನು ಕೊಳ್ಳೆ ಹೊಡೆದಿದೆ ಎಂದು ಹೇಳಿದರು.
‘2019ರಲ್ಲಿ ತೆಲಂಗಾಣದ ಜನರು ನಮಗೆ ನಾಲ್ಕು ಸ್ಥಾನಗಳನ್ನು ನೀಡಿದ್ದರು. ಈ ವರ್ಷ ನಮ್ಮನ್ನು 10 ಸ್ಥಾನಗಳಲ್ಲಿ ಗೆಲ್ಲಿಸಿ. ನಾವು ಮುಸ್ಲಿಮ್ ಮೀಸಲಾತಿಯನ್ನು ಅಂತ್ಯಗೊಳಿಸುತ್ತೇವೆ ಮತ್ತು ಎಸ್ಸಿ - ಎಸ್ಟಿಗಳು,ಒಬಿಸಿಗಳ ಮೀಸಲಾತಿಯನ್ನು ಹೆಚ್ಚಿಸುತ್ತೇವೆ ’ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಶಾ,‘ನಮ್ಮ ಪ್ರಣಾಳಿಕೆಯಲ್ಲಿ ನಾವು ಮೋದಿಯವರ ಗ್ಯಾರಂಟಿಗಳನ್ನು ನೀಡಿದ್ದೇವೆ ಮತ್ತು ಅವರು ತಾನು ಹೇಳಿದ್ದನ್ನು ಮಾಡುತ್ತಾರೆ. ರಾಹುಲ್ ಗ್ಯಾರಂಟಿಗಳು ಸೂರ್ಯಾಸ್ತದವರೆಗೆ ಸಹ ಉಳಿಯುವುದಿಲ್ಲ ’ ಎಂದರು.
ಕಾಂಗ್ರೆಸ್, ಬಿ ಆರ್ ಎಸ್ ಮತ್ತು ಎಐಎಂಐಎಂ ತುಷ್ಟೀಕರಣದ ತ್ರಿಮೂರ್ತಿಗಳು ಎಂದು ಬಣ್ಣಿಸಿದ ಶಾ,ಈ ಜನರು ಸಿಎಎ ಅನ್ನು ವಿರೋಧಿಸುತ್ತಿದ್ದಾರೆ. ಅವರು ತೆಲಂಗಾಣವನ್ನು ಕುರ್ಆನ್ ಆಧಾರದಲ್ಲಿ ನಡೆಸಲು ಬಯಸಿದ್ದಾರೆ. ಅವರು ತ್ರಿವಳಿ ತಲಾಕ್ನ್ನು ಮರಳಿ ತರಲು ಬಯಸಿದ್ದಾರೆ. ಅವರು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನೂ ಬಹಿಷ್ಕರಿಸಿದ್ದರು ಎಂದು ಹೇಳಿದರು.
ತೆಲಂಗಾಣದ ಎಲ್ಲ 17 ಲೋಕಸಭಾ ಸ್ಥಾನಗಳಿಗೆ ನಾಲ್ಕನೇ ಹಂತದಲ್ಲಿ ಮೇ 13ರಂದು ಮತದಾನ ನಡೆಯಲಿದೆ.