ಟಿಎಂಸಿ ಹಿಂದೂಗಳ ನಂಬಿಕೆಯನ್ನು ಅವಮಾನಿಸುತ್ತಿದೆ, 'ನುಸುಳುಕೋರರು' ಬಂಗಾಳದ ಜನಸಂಖ್ಯೆಯನ್ನು ಬದಲಾಯಿಸುತ್ತಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
ಹೆಸರು ಉಲ್ಲೇಖಿಸದೇ ಮತ್ತೆ ದ್ವೇಷ ಭಾಷಣದ ದಿನಚರಿ ಮುಂದುವರಿಸಿದ ಪ್ರಧಾನಿ
ಮಿಡ್ನಾಪುರ : ʼನುಸುಳುಕೋರರುʼ ಪಶ್ಚಿಮ ಬಂಗಾಳಕ್ಕೆ ಅಪಾಯಕಾರಿ. ಟಿಎಂಸಿ ತನ್ನ ʼನುಸುಳುಕೋರʼರ ಮತ ಬ್ಯಾಂಕ್ ಗಾಗಿ ಹಿಂದೂಗಳ ನಂಬಿಕೆಯನ್ನು ಅವಮಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರವಿವಾರ ತಮ್ಮ ಮೂರನೇ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, "ಟಿಎಂಸಿಯ ಮತಬ್ಯಾಂಕ್ ಆಗಿರುವ ʼನುಸುಳುಕೋರʼರು ರಾಜ್ಯಕ್ಕೆ ಅಪಾಯಕಾರಿಯಾಗಿದ್ದಾರೆ. ಏಕೆಂದರೆ ಅನೇಕ ಪ್ರದೇಶಗಳಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ”, ಎಂದು ಹೇಳಿದ್ದಾರೆ.
"ಬಂಗಾಳದಲ್ಲಿ ಟಿಎಂಸಿ ಎಂದರೆ ಭಯೋತ್ಪಾದನೆ, ಭ್ರಷ್ಟಾಚಾರ, ಓಲೈಕೆಯ ರಾಜಕಾರಣ ಮತ್ತು ಸ್ವಜನಪಕ್ಷಪಾತ. ಟಿಎಂಸಿ ತನ್ನ ವೋಟ್ ಬ್ಯಾಂಕ್ ಅನ್ನು ಓಲೈಸಲು ಹಿಂದೂಗಳ ನಂಬಿಕೆಯನ್ನು ಅವಮಾನಿಸುತ್ತಿದೆ. ಪಶ್ಚಿಮ ಬಂಗಾಳದ ಸಿಎಂ ಇತ್ತೀಚೆಗೆ ನೀಡಿದ ಅವಹೇಳನಕಾರಿ ಹೇಳಿಕೆಯಿಂದ ಇಡೀ ದೇಶ ಕ್ರುದ್ಧವಾಗಿದೆ” ಎಂದು ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘದ ವಿರುದ್ಧ ಮಾಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
“ಟಿಎಂಸಿ ಇತರ ರಾಜ್ಯಗಳ ಜನರನ್ನು 'ಹೊರಗಿನವರು' ಎಂದು ಕರೆಯುತ್ತದೆ. ಆದರೆ ʼನುಸುಳುಕೋರʼರಿಗೆ ಅವಕಾಶ ನೀಡುತ್ತಿದೆ. ಟಿಎಂಸಿಯ ತುಷ್ಟೀಕರಣವು ಬಂಗಾಳದ ಜನಸಂಖ್ಯೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ”, ಎಂದು ಪ್ರಧಾನಿ ಆರೋಪಿಸಿದ್ದಾರೆ.
“ಒಳನುಸುಳುಕೋರರು ಪಶ್ಚಿಮ ಬಂಗಾಳಕ್ಕೆ ಅಪಾಯಕಾರಿ. ಅವರೀಂದಾಗಿ ಅನೇಕ ಭಾಗಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ನುಸುಳುಕೋರರು ದಲಿತರು ಮತ್ತು ಹಿಂದುಳಿದವರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅವರಿಂದಾಗಿ ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರು ಸುರಕ್ಷಿತವಾಗಿಲ್ಲ” ಎಂದು ಮೋದಿ ಆರೋಪಿಸಿದ್ದಾರೆ.