ಗೂಗಲ್ ನಕ್ಷೆ ನೋಡಿಕೊಂಡು ನಾಗಾಲ್ಯಾಂಡ್ ತಲುಪಿದ ಅಸ್ಸಾಂ ಪೊಲೀಸರು!
ಕ್ರಿಮಿನಲ್ ಗಳು ಎಂದು ಸೆರೆ ಹಿಡಿದಿಟ್ಟುಕೊಂಡ ಗ್ರಾಮಸ್ಥರು
.ಸಾಂದರ್ಭಿಕ ಚಿತ್ರ | PC : GOOGLE MAP
ಗುವಾಹಟಿ: ದಾಳಿಯ ಸಂದರ್ಭದಲ್ಲಿ ಗೂಗಲ್ ನಕ್ಷೆಯನ್ನು ಅನುಸರಿಸಿಕೊಂಡ ಹೋದ 16 ಮಂದಿ ಸದಸ್ಯರ ಅಸ್ಸಾಂ ಪೊಲೀಸರ ತಂಡವು, ತಪ್ಪಾಗಿ ನಾಗಾಲ್ಯಾಂಡ್ ನ ಮೊಕೊಚುಂಗ್ ಜಿಲ್ಲೆಗೆ ತಲುಪಿದ್ದು, ಅವರ ಮೇಲೆ ದಾಳಿ ನಡೆಸಿರುವ ಸ್ಥಳೀಯರು, ರಾತ್ರಿಯಿಡೀ ಹಿಡಿದಿಟ್ಟುಕೊಂಡಿರುವ ಘಟನೆ ನಡೆದಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ಪೊಲೀಸ್ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಆರೋಪಿಯೊಬ್ಬನನ್ನು ಸೆರೆ ಹಿಡಿಯಲು ಜೋರ್ಹಾಟ್ ಜಿಲ್ಲಾ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಜರುಗಿದೆ ಎಂದು ಹೇಳಿದ್ದಾರೆ.
“ಗೂಗಲ್ ನಕ್ಷೆಯ ಪ್ರಕಾರ, ಅದೊಂದು ಚಹಾ ತೋಟದ ಪ್ರದೇಶವಾಗಿತ್ತು. ಆದರೆ, ಅದು ವಾಸ್ತವವಾಗಿ ನಾಗಾಲ್ಯಾಂಡ್ ರಾಜ್ಯದೊಳಗಿತ್ತು. ಕ್ರಿಮಿನಲ್ ಅನ್ನು ಹುಡುಕಿಕೊಂಡು ಗೊಂದಲದಿಂದ ಹಾಗೂ ಜಿಪಿಎಸ್ ನಲ್ಲಿನ ತಪ್ಪಾದ ಮಾರ್ಗದರ್ಶನದಿಂದ ನಾಗಾಲ್ಯಾಂಡ್ ನೊಳಗೆ ತಲುಪಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಆದರೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅಸ್ಸಾಂ ಪೊಲೀಸರನ್ನು ದುಷ್ಕರ್ಮಿಗಳೆಂದು ಭಾವಿಸಿದ ಸ್ಥಳೀಯರು, ಅವರನ್ನು ಸೆರೆ ಹಿಡಿದಿಟ್ಟುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
“16 ಮಂದಿ ಪೊಲೀಸ್ ಸಿಬ್ಬಂದಿಗಳ ಪೈಕಿ ಕೇವಲ ಮೂವರು ಸಿಬ್ಬಂದಿಗಳು ಮಾತ್ರ ಸಮವಸ್ತ್ರ ಧರಿಸಿದ್ದರೆ, ಉಳಿದವರು ಸಾಮಾನ್ಯ ಉಡುಪಿನಲ್ಲಿದ್ದರು. ಇದೂ ಕೂಡಾ ಸ್ಥಳೀಯರಲ್ಲಿ ಗೊಂದಲ ಮೂಡಿಸಿತು. ಅವರು ಪೊಲೀಸ್ ತಂಡದ ಮೇಲೆ ದಾಳಿಯನ್ನೂ ನಡೆಸಿದ್ದು, ಈ ದಾಳಿಯಲ್ಲಿ ನಮ್ಮ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ” ಎಂದೂ ಅವರು ಮಾಹಿತಿ ನೀಡಿದ್ದಾರೆ.
ನಂತರ, ಇದೇ ತಂಡವು ಅಸ್ಸಾಂನ ನೈಜ ಪೊಲೀಸ್ ತಂಡ ಎಂದು ಸ್ಥಳೀಯರಿಗೆ ಮನವರಿಕೆಯಾಗಿದ್ದು, ಅವರು ಗಾಯಗೊಂಡಿದ್ದ ಸಿಬ್ಬಂದಿ ಸೇರಿದಂತೆ ಒಟ್ಟು ಐದು ಮಂದಿಯನ್ನು ಬಿಡುಗಡೆಗೊಳಿಸಿದ್ದರು ಎನ್ನಲಾಗಿದೆ.
“ಆದರೆ, ಅವರು ಉಳಿದ 11 ಮಂದಿ ಸಿಬ್ಬಂದಿಯನ್ನು ರಾತ್ರಿಯಿಡೀ ಸೆರೆ ಹಿಡಿದಿಟ್ಟುಕೊಂಡಿದ್ದರು. ಅವರನ್ನು ಬೆಳಗ್ಗೆ ಬಿಡುಗಡೆಗೊಳಿಸಲಾಯಿತು ಹಾಗೂ ಅವರೆಲ್ಲ ನಂತರ ಜೋರ್ಹಟ್ ಅನ್ನು ತಲುಪಿದರು” ಎಂದು ಅವರು ತಿಳಿಸಿದ್ದಾರೆ.