ಅದಾನಿ ಸಾಮ್ರಾಜ್ಯವನ್ನು ಅಲುಗಾಡಿಸಿದ್ದ ಹಿಂಡೆನ್ಬರ್ಗ್ ರೀಸರ್ಚ್ ಬಂದ್!
ಇದು ಭಾರತಕ್ಕೇಕೆ ಮುಖ್ಯ?
Photo: thewire.in
ಹೊಸದಿಲ್ಲಿ : ತನ್ನ ಸ್ಫೋಟಕ ವರದಿಗಳ ಮೂಲಕ ಅದಾನಿ ಸಮೂಹವನ್ನು ಇನ್ನಿಲ್ಲದಂತೆ ಕಾಡಿದ್ದ ಅಮೆರಿಕದ ಹಿಂಡೆನ್ಬರ್ಗ್ ರೀಸರ್ಚ್ ಸ್ಥಗಿತಗೊಳ್ಳಲಿದೆ. ಕೈಗಾರಿಕೋದ್ಯಮಿ ಗೌತಮ ಅದಾನಿ ಒಡೆತನದ ಅದಾನಿ ಗ್ರೂಪ್ ಕುರಿತು ವರದಿಯನ್ನು ಪ್ರಕಟಿಸಿ ಶೇರು ಮಾರುಕಟ್ಟೆಗಳಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿದ್ದ ಅಮೆರಿಕದ ಹಿಂಡೆನ್ಬರ್ಗ್ ರೀಸರ್ಚ್ನ ಸ್ಥಾಪಕ,ಶಾರ್ಟ್ ಸೆಲ್ಲರ್ ನೇಥನ್ ಆ್ಯಂಡರ್ಸನ್ ಅವರು ತಾನು ಸಂಸ್ಥೆಯನ್ನು ವಿಸರ್ಜಿಸುತ್ತಿರುವುದಾಗಿ ಬುಧವಾರ ಪ್ರಕಟಿಸಿದ್ದಾರೆ. ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರು ಅದಾನಿಗೆ ಸಂಬಂಧಿಸಿದ ವಿದೇಶಿ ಫಂಡ್ಗಳಲ್ಲಿ ಹೂಡಿಕೆಯನ್ನು ಹೊಂದಿದ್ದಾರೆ ಎಂದು ತನ್ನ ಇನ್ನೊಂದು ವರದಿಯಲ್ಲಿ ಬೆಟ್ಟು ಮಾಡಿದ್ದ ಹಿಂಡೆನ್ಬರ್ಗ್ ರೀಸರ್ಚ್ ಸೆಬಿಗೂ ಬಿಸಿ ಮುಟ್ಟಿಸಿತ್ತು.
ಹಿಂಡೆನ್ಬರ್ಗ್ ರೀಸರ್ಚ್ನ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ತನ್ನ ಹೇಳಿಕೆಯಲ್ಲಿ ಆ್ಯಂಡರ್ಸನ್, ‘ಸಂಸ್ಥೆಯ ಮೇಲೆ ತೀವ್ರ ಗಮನವನ್ನು ಕೇಂದ್ರೀಕರಿಸುವ ಮೂಲಕ ನಾನು ಇತರ ಜಗತ್ತನ್ನು ಮತ್ತು ನಾನು ಕಾಳಜಿ ಹೊಂದಿರುವ ಜನರನ್ನು ಕಳೆದುಕೊಳ್ಳುವಂತಾಗಿದೆ. ಈಗ ಹಿಂಡೆನ್ಬರ್ಗ್ನ್ನು ನನ್ನ ಜೀವನದ ಒಂದು ಅಧ್ಯಾಯವನ್ನಾಗಿ ನೋಡುತ್ತೇನೆ, ನನ್ನನ್ನು ವ್ಯಾಖ್ಯಾನಿಸುವ ಕೇಂದ್ರ ವಿಷಯವನ್ನಾಗಿ ಅಲ್ಲ’ ಎಂದು ತಿಳಿಸಿದ್ದಾರೆ.
‘ನಾನು ಮತ್ತು ನನ್ನ ಪುಟ್ಟ ತಂಡ ನಿಖರತೆಯ ಮೇಲೆ ಮತ್ತು ನಮ್ಮ ವರದಿಗಳನ್ನು ಸಮರ್ಥಿಸುವ ಪುರಾವೆಗಳ ಮೇಲೆ ಕಠಿಣವಾಗಿ ಶ್ರಮಿಸಿದೆ. ಅದಕ್ಕಾಗಿ ನಾವು ಗಮನವನ್ನು ಕೇಂದ್ರೀಕರಿಸಿದ್ದೆವು. ವ್ಯಕ್ತಿಗಳಾಗಿ ನಮಗಿಂತ ಹೆಚ್ಚು ದೊಡ್ಡ ಹೋರಾಟಗಳನ್ನು ನಾವು ಕೈಗೆತ್ತಿಕೊಂಡಿದ್ದೆವು’ ಎಂದು ಆ್ಯಂಡರ್ಸ್ನ್ ಹೇಳಿದ್ದಾರೆ.
ಹಿಂಡೆನ್ಬರ್ಗ್ ತನ್ನ 2023ರ ವರದಿಯಲ್ಲಿ ಅದಾನಿ ಸಮೂಹವು ತನ್ನ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸುವ ಮೂಲಕ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದು ಅದಾನಿ ಸಾಮ್ರಾಜ್ಯವನ್ನು ಅಲುಗಾಡಿಸಿತ್ತು. ಶೇರು ಮಾರುಕಟ್ಟೆಗಳಲ್ಲಿ ಅದಾನಿ ಸಮೂಹದ ಕಂಪನಿಗಳ ಶೇರುಗಳು ಬೆಲೆಗಳು ಭಾರೀ ಕುಸಿತವನ್ನು ಕಂಡು ಹೂಡಿಕೆದಾರರು ಕಂಗಾಲಾಗಿದ್ದರು. ಇದರ ಬೆನ್ನಲ್ಲೇ 2024ರಲ್ಲಿ ಇನ್ನೊಂದು ಸ್ಫೋಟಕ ವರದಿಯನ್ನು ಪ್ರಕಟಿಸಿದ್ದ ಹಿಂಡೆನ್ಬರ್ಗ್ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಅದಾನಿ ಸಮೂಹವು ತನ್ನ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲು ಹುಟ್ಟು ಹಾಕಿದ್ದ ಎರಡು ವಿದೇಶಿ ನಿಧಿಗಳಲ್ಲಿ ಹೂಡಿಕೆಯನ್ನು ಹೊಂದಿದ್ದಾರೆ ಮತ್ತು ಸೆಬಿ ಇದೇ ಕಾರಣದಿಂದ ಅದಾನಿ ವಿರುದ್ಧ ತನಿಖೆಗೆ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ್ದು, ಇದು ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು.
ಹಿಂಡೆನ್ಬರ್ಗ್ ಸ್ಥಾಪನೆಗೊಂಡ ಬಳಿಕ ಅದು ಪ್ರಕಟಿಸಿದ್ದ ಮೊದಲ ಎರಡು ಪ್ರಮುಖ ಸಂಶೋಧನಾ ವರದಿಗಳು ಆಗ ಅಮೆರಿಕದ ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದ್ದ ಭಾರತೀಯ ಚಲನಚಿತ್ರ ನಿರ್ಮಾಣ ಕಂಪನಿ ಎರೋಸ್ ಇಂಟರ್ನ್ಯಾಷನಲ್ ಅನ್ನು ಕೇಂದ್ರೀಕರಿಸಿದ್ದವು. ಸಂಸ್ಥೆಯ ಲೆಕ್ಕಪತ್ರಗಳಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಈ ವರದಿಗಳು ಆರೋಪಿಸಿದ್ದವು. ಕಂಪನಿಯು ಹಿಂಡೆನ್ಬರ್ಗ್ ವಿರುದ್ಧ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿತ್ತಾದರೂ ಅದು ವಜಾಗೊಂಡಿತ್ತು. 2019ರಲ್ಲಿ ಹಿಂಡೆನ್ಬರ್ಗ್ ಎರೋಸ್ ಇಂಟರ್ನ್ಯಾಷನಲ್ ವಿರುದ್ಧ ತನ್ನ ಮೂರನೇ ವರದಿಯನ್ನು ಪ್ರಕಟಿಸಿತ್ತು. ಜನವರಿ 2023ರಲ್ಲಿ ಎರೋಸ್ ಇಂಟರ್ನ್ಯಾಶನಲ್ ಅನ್ನು ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಿಂದ ಡಿಲಿಸ್ಟ್ ಮಾಡಲಾಗಿತ್ತು.
ಸೌಜನ್ಯ: thewire.in