ನ್ಯೂಸ್ ಕ್ಲಿಕ್ ಪ್ರಕರಣ | ಮಾಫಿ ಸಾಕ್ಷಿದಾರನ ಬಿಡುಗಡೆಗೆ ದಿಲ್ಲಿ ಹೈಕೋರ್ಟ್ ಆದೇಶ

ನ್ಯೂಸ್ ಕ್ಲಿಕ್ , ದಿಲ್ಲಿ ಹೈಕೋರ್ಟ್ (PTI)
ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿತರಾಗಿರುವ ‘ನ್ಯೂಸ್ ಕ್ಲಿಕ್’ ಸುದ್ದಿ ವೆಬ್ ಸೈಟ್ನ ಮಾನವ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರಬರ್ತಿಯನ್ನು ಬಿಡುಗಡೆಗೊಳಿಸಲು ದಿಲ್ಲಿ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.
‘ನ್ಯೂಸ್ ಕ್ಲಿಕ್’ ವಿರುದ್ಧದ ಪ್ರಕರಣವೊಂದರಲ್ಲಿ ಮಾಫಿ ಸಾಕ್ಷಿದಾರನಾಗಿ ಪರಿವರ್ತನೆಯಾಗಿರುವ ಅಮಿತ್ ಚಕ್ರಬರ್ತಿಗೆ ನಾಲ್ಕು ತಿಂಗಳ ಹಿಂದೆಯೇ ಕ್ಷಮಾದಾನ ನೀಡಲಾಗಿತ್ತು.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ದಾಖಲಾಗಿರುವ ಮೊಕದ್ದಮೆಯಲ್ಲಿ ಮಾಫಿ ಸಾಕ್ಷಿದಾರನಾಗಿ ಪರಿವರ್ತನೆಯಾಗಲು ದಿಲ್ಲಿ ನ್ಯಾಯಾಲಯವೊಂದು ಚಕ್ರಬರ್ತಿಗೆ ಅನುಮೋದನೆ ನೀಡಿತ್ತು. ಆ ಬಳಿಕ ಅವರಿಗೆ ಪ್ರಕರಣದಲ್ಲಿ ಕ್ಷಮಾದಾನ ನೀಡಲಾಗಿತ್ತು.
ನ್ಯಾಯಾಂಗ ಬಂಧನದಿಂದ ಚಕ್ರಬರ್ತಿಯನ್ನು ಬಿಡುಗಡೆಗೊಳಿಸಲು ತನ್ನ ಆಕ್ಷೇಪವಿಲ್ಲ ಎಂದು ಪ್ರಾಸಿಕ್ಯೂಶನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಹೈಕೋರ್ಟ್ ನ್ಯಾಯಾಧೀಶೆ ಸ್ವರಣ ಕಾಂತ ಶರ್ಮ ಸೋಮವಾರ ಹೇಳಿದರು.
ಚಕ್ರಬರ್ತಿ ಗಾಲಿಕುರ್ಚಿಯನ್ನು ಬಳಸುತ್ತಿದ್ದಾರೆ ಹಾಗೂ ಅವರ ವೈದ್ಯಕೀಯ ಪರಿಸ್ಥಿತಿಯು ವಿಶೇಷ ಮಾನವೀಯ ಪರಿಗಣನೆಗೆ ಅರ್ಹವಾಗಿದೆ ಎಂದು ನ್ಯಾ. ಶರ್ಮ ಹೇಳಿದರು.
‘‘ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ’’ ಚೀನಾದ ಸಂಸ್ಥೆಗಳಿಂದ ಹಣ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ‘ನ್ಯೂಸ್ ಕ್ಲಿಕ್’ ವೆಬ್ ಸೈಟ್ನ ಸ್ಥಾಪಕ ಪ್ರಬೀರ್ ಪುರಕಾಯಸ್ಥ ಅದರ ಮಾತೃ ಸಂಸ್ಥೆ ಪಿಪಿಕೆ ನ್ಯೂಸ್ ಕ್ಲಿಕ್ ಸ್ಟುಡಿಯೊ ಪ್ರೈವೇಟ್ ಲಿಮಿಟೆಡ್ ವಿರುದ್ಧ ದಿಲ್ಲಿ ಪೊಲೀಸರು ಮಾರ್ಚ್ 30ರಂದು ಮೊಕದ್ದಮೆ ದಾಖಲಿಸಿದ್ದರು.
ಬಳಕ, ಅಕ್ಟೋಬರ್ 3ರಂದು ಚಕ್ರಬರ್ತಿ ಮತ್ತು ಪುರಕಾಯಸ್ಥರನ್ನು ಪೊಲೀಸರು ಬಂಧಿಸಿದ್ದರು.