ನ್ಯೂಸ್ ಕ್ಲಿಕ್ ವಿವಾದ: ಪುರಕಾಯಸ್ಥ, ಚಕ್ರವರ್ತಿ ಬಂಧನದ ವಿರುದ್ಧ ಅರ್ಜಿಯ ವಿಚಾರಣೆ ಅ.9ಕ್ಕೆ ಮುಂದೂಡಿದ ದಿಲ್ಲಿ ಹೈಕೋರ್ಟ್
Photo: PTI
ಹೊಸದಿಲ್ಲಿ : ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಸುದ್ದಿ ಜಾಲತಾಣ ನ್ಯೂಸ್ ಕ್ಲಿಕ್ ಸ್ಥಾಪಕ ಪ್ರಬೀರ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರ ಬಂಧನದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಅ.9ಕ್ಕೆ ಮುಂದೂಡಿದ ದಿಲ್ಲಿ ಉಚ್ಚ ನ್ಯಾಯಾಲಯವು, ಅರ್ಜಿಗಳ ಕುರಿತು ದಿಲ್ಲಿ ಪೊಲೀಸರಿಗೆ ನೋಟಿಸನ್ನು ಹೊರಡಿಸಿದೆ.
ಪುರಕಾಯಸ್ಥ ಮತ್ತು ಚಕ್ರವರ್ತಿ ಅವರ ಅರ್ಜಿಗಳು ಬಾಕಿಯಿರುವಂತೆ ಮಧ್ಯಂತರ ಬಿಡುಗಡೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಉತ್ತರಿಸುವಂತೆಯೂ ನ್ಯಾ.ತುಷಾರರಾವ್ ಗೆಡೇಲಾ ಅವರು ದಿಲ್ಲಿ ಪೊಲೀಸರಿಗೆ ಸೂಚಿಸಿದರು.
ಪುರಕಾಯಸ್ಥ ಮತ್ತು ಚಕ್ರವರ್ತಿ ಅವರಿಗೆ ದಿಲ್ಲಿಯ ನ್ಯಾಯಾಲಯವೊಂದು ಏಳು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದ್ದನ್ನೂ ಪ್ರಶ್ನಿಸಿರುವ ನ್ಯೂಸ್ ಕ್ಲಿಕ್, ಅವರಿಬ್ಬರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆಯೂ ಆಗ್ರಹಿಸಿದೆ.
ಚೀನಾ ಪರ ಪ್ರಚಾರವನ್ನು ಹರಡಲು ಹಣವನ್ನು ಸ್ವೀಕರಿಸಿದ್ದ ಆರೋಪದಲ್ಲಿ ನ್ಯೂಸ್ ಕ್ಲಿಕ್ ವಿರುದ್ಧ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಅ.3ರಂದು ಪುರಕಾಯಸ್ಥ ಮತ್ತು ಚಕ್ರವರ್ತಿಯವರನ್ನು ಬಂಧಿಸಿದ್ದರು. ಬುಧವಾರ ದಿಲ್ಲಿಯ ನ್ಯಾಯಾಲಯವು ಅವರಿಗೆ ಏಳು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿತ್ತು.
ಗುರುವಾರ ನ್ಯಾಯಾಲಯವು ಬಂಧಿತರಿಗೆ ಎಫ್ಐಆರ್ ಪ್ರತಿಯನ್ನು ಒದಗಿಸುವಂತೆ ಪೊಲೀಸರಿಗೆ ಆದೇಶಿಸಿತ್ತು.