Fact Check | ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳ ಅಸಲಿಯತ್ತು ಇಲ್ಲಿದೆ...
Photo credit: ptinews.com
ಹೊಸದಿಲ್ಲಿ: ಈ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಇನ್ನೊಂದು ರಾಜಕೀಯ ಮರುಹೊಂದಾಣಿಕೆಯ ಊಹಾಪೋಹಗಳ ನಡುವೆ ನಿತೀಶ್ ಕುಮಾರ್ಗೆ ಸಂಬಂಧಿಸಿದ ಹಲವಾರು ಸುದ್ದಿತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಿತೀಶ್ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಆಡಳಿತಾರೂಢ ಎನ್ಡಿಎಯಿಂದ ಹೊರಬಂದಿದ್ದಾರೆ ಎಂದು ಈ ಪೋಸ್ಟ್ಗಳಲ್ಲಿ ಹೇಳಲಾಗಿದೆ. ನಿತೀಶ್ ಮತ್ತೊಮ್ಮೆ ಆರ್ಜೆಡಿ ನೇತೃತ್ವದ ‘ಮಹಾ ಘಟಬಂಧನ’ವನ್ನು ಸೇರಿದ್ದಾರೆ ಎಂದೂ ಪ್ರತಿಪಾದಿಸಲಾಗಿದೆ.
ಪಿಟಿಐ ಫ್ಯಾಕ್ಟ್ ಚೆಕ್ ಡೆಸ್ಕ್ ನಡೆಸಿದ ತನಿಖೆಯು ಈ ಸುದ್ದಿ ವರದಿಗಳು ಆಗಸ್ಟ್ 2022ರಷ್ಟು ಹಿಂದಿನದಾಗಿವೆ ಎನ್ನುವುದನ್ನು ಪತ್ತೆ ಹಚ್ಚಿದೆ. ಆಗ ನಿತೀಶ್ ಬಿಜೆಪಿ ತನ್ನ ಪಕ್ಷ ಜೆಡಿಯುವನ್ನು ‘ಒಡೆಯಲು ಮತ್ತು ಅದನ್ನು ಮುಗಿಸಲು’ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಎನ್ಡಿಎಯಿಂದ ಹೊರಬಂದಿದ್ದರು. ಇವೇ ಹಳೆಯ ವೀಡಿಯೊಗಳನ್ನು ಸುಳ್ಳು ಹೇಳಿಕೆಗಳೊಂದಿಗೆ ಇತ್ತೀಚಿನ ವೀಡಿಯೊಗಳು ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.
ಗಮನಾರ್ಹವಾಗಿ,ಜನವರಿ 2024ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಸೇರುವ ಮುನ್ನ ಕಳೆದೊಂದು ದಶಕದಲ್ಲಿ ನಿತೀಶ ಎರಡು ಬಾರಿ ಆರ್ಜೆಡಿಯೊಂದಿಗೆ,ತೀರ ಇತ್ತೀಚಿಗೆ ಮಹಾಘಟಬಂಧನ ಭಾಗವಾಗಿ ಹೊಂದಾಣಿಕೆ ಮಾಡಿಕೊಂಡಿದ್ದರು.
ಪಿಟಿಐ ಫ್ಯಾಕ್ಟ್ ಚೆಕ್ ಡೆಸ್ಕ್ ವೈರಲ್ ಆಗಿರುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಪೈಕಿ ನಾಲ್ಕರ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ. ಇನ್ವಿಡ್ ಟೂಲ್ ಸರ್ಚ್, ಗೂಗಲ್ ಲೆನ್ಸ್ಗಳನ್ನು ಬಳಸಿ ಜಾಲಾಡಿದಾಗ ಇವೆಲ್ಲ 2022ರಲ್ಲಿ ನಿತೀಶ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಎನ್ಡಿಎ ಜೊತೆ ಸಂಬಂಧವನ್ನು ಕಡಿದುಕೊಂಡಿದ್ದ ಸಂದರ್ಭದಲ್ಲಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದ್ದ ವೀಡಿಯೊಗಳು ಎನ್ನುವುದು ಸಾಬೀತಾಗಿದೆ.
ಜನರನ್ನು ಹಾದಿ ತಪ್ಪಿಸಲು ಇವುಗಳನ್ನು ಈಗ ನಿತೀಶ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಮತ್ತು ಎನ್ಡಿಎ ತೊರೆದಿದ್ದಾರೆ ಎಂಬ ಸುಳ್ಳು ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.
ಈ ಲೇಖನವನ್ನು ಮೊದಲು PTI ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.