ಯುಎಪಿಎ ಪ್ರಕರಣದಡಿಯಲ್ಲಿ ಬಂಧನ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನ್ಯೂಸ್ ಕ್ಲಿಕ್ ಸಂಸ್ಥಾಪಕ
Photo credit: PTI
ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಅಡಿ ತಮ್ಮನ್ನು ಬಂಧಿಸಿ, ಪೊಲೀಸರ ವಶಕ್ಕೆ ನೀಡಿರುವ ಕ್ರಮವನ್ನು ರದ್ದುಗೊಳಿಸಲು ದಿಲ್ಲಿ ಹೈಕೋರ್ಟ್ ನಿರಾಕರಿಸಿರುವುದರಿಂದ ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಹಾಗೂ ಆ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ndtv.com ವರದಿ ಮಾಡಿದೆ.
ಪ್ರಕರಣದ ದಾಖಲೆಗಳನ್ನು ಒದಗಿಸುವಂತೆ ಪುರ್ಕಾಯಸ್ಥ ಪರ ವಕೀಲ ಕಪಿಲ್ ಸಿಬಲ್ ಅವರಿಗೆ ಸೂಚಿಸಿರುವ ಸುಪ್ರೀಂ ಕೋರ್ಟ್, ನಂತರ ವಿಚಾರಣಾ ದಿನಾಂಕದ ಕುರಿತು ನಿರ್ಧರಿಸುವುದಾಗಿ ಅವರಿಗೆ ತಿಳಿಸಿದೆ.
ಬಂಧನದ ಸಮಯದಲ್ಲಿ ತಮ್ಮನ್ನು ಯಾವ ನೆಲೆಯಲ್ಲಿ ಬಂಧಿಸಲಾಗಿದೆ ಎಂಬ ಕುರಿತು ಪೊಲೀಸರು ಲಿಖಿತ ವಿವರಣೆ ನೀಡಬೇಕು ಎಂಬ ಪುರ್ಕಾಯಸ್ಥ ಹಾಗೂ ಚಕ್ರವರ್ತಿ ಅವರ ವಾದವನ್ನು ಇತ್ತೀಚೆಗೆ ತಳ್ಳಿ ಹಾಕಿದ್ದ ದಿಲ್ಲಿ ಹೈಕೋರ್ಟ್, ಕಠಿಣ ಅಕ್ರಮ ಚಟುವಟಿಕೆಗಳ ನಿಗ್ರಹ ಕಾಯ್ದೆ ಅಡಿ ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆದು ಬಂಧಿಸುವಾಗ, ಅಂಥವರಿಗೆ ಪೊಲೀಸರು ಲಿಖಿತ ವಿವರಣೆ ನೀಡಬೇಕಿಲ್ಲ ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ಅಕ್ಟೋಬರ್ 3ರಂದು ಭಾರತದಲ್ಲಿ ಚೀನಾ ಪರವಾದ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಹಣ ಪಡೆಯಲಾಗಿದೆ ಎಂಬ ಆರೋಪದಡಿ ಪುರ್ಕಾಯಸ್ಥ ಹಾಗೂ ಚಕ್ರವರ್ತಿ ಅವರನ್ನು ಅಕ್ರಮ ಚಟುವಟಿಕೆಗಳ ನಿಗ್ರಹ ಕಾಯ್ದೆ ಅನ್ವಯ ದಿಲ್ಲಿ ಪೊಲೀಸ್ ಇಲಾಖೆಯ ವಿಶೇಷ ಘಟಕವು ಬಂಧಿಸಿತ್ತು. ಈ ಬಂಧನವನ್ನು ಪ್ರಶ್ನಿಸಿ, ಪುರ್ಕಾಯಸ್ಥ ಹಾಗೂ ಚಕ್ರವರ್ತಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ, ಅವರ ವಾದವನ್ನು ದಿಲ್ಲಿ ಹೈಕೋರ್ಟ್ ತಳ್ಳಿ ಹಾಕಿತ್ತು. ಹೀಗಾಗಿ, ಅವರಿಬ್ಬರೂ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.