ಅಹಾರ ಪದಾರ್ಥಗಳನ್ನು ಪೊಟ್ಟಣ ಕಟ್ಟಲು, ಸಂಗ್ರಹಿಸಿಡಲು ದಿನಪತ್ರಿಕೆಗಳನ್ನು ಬಳಸಬಾರದು: FSSAI ಎಚ್ಚರಿಕೆ
ಸಾಂದರ್ಭಿಕ ಚಿತ್ರ| Photo: NDTV
ಹೊಸದಿಲ್ಲಿ: ದೇಶಾದ್ಯಂತ ಇರುವ ಗ್ರಾಹಕರು ಹಾಗೂ ಮಾರಾಟಗಾರರಿಗೆ ಆಹಾರ ಪದಾರ್ಥಗಳ ಪೊಟ್ಟಣ ಕಟ್ಟಲು, ಪೂರೈಸಲು ಹಾಗೂ ಸಂಗ್ರಹಿಸಿಡಲು ದಿನಪತ್ರಿಕೆಗಳನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.
ಬುಧವಾರ ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣ ಪ್ರಾಧಿಕಾರವು (FSSAI ) ಈ ಮಾರ್ಗಸೂಚಿಯನ್ನು ಹೊರಡಿಸಿದ್ದು, ಆಹಾರ ಪದಾರ್ಥಗಳನ್ನು ಸುತ್ತಲು ಅಥವಾ ಪೊಟ್ಟಣ ಕಟ್ಟಲು ದಿನಪತ್ರಿಕೆಗಳನ್ನು ಬಳಸುವುದರಿಂದ ಆಗುವ ಆರೋಗ್ಯ ದುಷ್ಪರಿಣಾಮಗಳ ಕುರಿತು ತನ್ನ ಕಳವಳ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಫ್ಎಸ್ಎಸ್ಎಐ ಸಿಇಒ ಕಮಲ ವರ್ಧನ ರಾವ್, ದಿನಪತ್ರಿಕೆಗಳನ್ನು ಆಹಾರ ಪದಾರ್ಥಗಳನ್ನು ಸುತ್ತುವ ಮತ್ತು ಪೊಟ್ಟಣ ಕಟ್ಟಲು ಬಳಸುವ ರೂಢಿಯಿಂದ ಗಮನಾರ್ಹ ಆರೋಗ್ಯ ಸಂಬಂಧಿ ಅಪಾಯಗಳಿದ್ದು, ಈ ನಡೆಯು ಗ್ರಾಹಕರು, ಮಾರಾಟಗಾರರು ಹಾಗೂ ಸಂಬಂಧಿಸಿದ ವ್ಯಕ್ತಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
"ದಿನಪತ್ರಿಕೆಗಳ ಮುದ್ರಣಕ್ಕೆ ಬಳಕೆಯಾಗುವ ಶಾಹಿಯು ಹಲವಾರು ಕ್ರಿಯಾಶೀಲ ಜೈವಿಕ ವಸ್ತುಗಳನ್ನು ಹೊಂದಿದ್ದು, ಅವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಕ್ಕೆ ಕುಖ್ಯಾತವಾಗಿವೆ. ಈ ರಾಸಾಯನಿಕಗಳು ಆಹಾರ ಪದಾರ್ಥಗಳನ್ನು ವಿಷಪೂರಿತಗೊಳಿಸಿ, ಅವನ್ನು ಸೇವಿಸಿದಾಗ ಆರೋಗ್ಯ ವ್ಯತ್ಯಯವಾಗುವ ಸಾಧ್ಯತೆ ಇದೆ" ಎಂದೂ ಅವರು ಹೇಳಿದ್ದಾರೆ.