ಸೈಬರ್ ‘ಗುಲಾಮಗಿರಿ’ ಪ್ರಕರಣ: ಎನ್ಐಎನಿಂದ ಓರ್ವನ ಬಂಧನ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮಾನವಕಳ್ಳಸಾಗಣೆ ಹಾಗೂ ಸೈಬರ್ ‘ಗುಲಾಮಗಿರಿ’ ಪ್ರಕರಣಕ್ಕೆ ಸಂಬಂಧಿಸಿ ತಾನು ನಡೆಸುತ್ತಿರುವ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ರವಿವಾರ ದಿಲ್ಲಿ ಜಾಮಿಯಾ ನಗರದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದೆ.
ಬಂಧಿತ ಆರೋಪಿಯನ್ನು ಕಮ್ರಾನ್ ಹೈದರ್ ಎಂದು ಗುರುತಿಸಲಾಗಿದೆ. ಶನಿವಾರದಿಂದ ಆರಂಭಗೊಂಡ ಈ ದಾಳಿಯಲ್ಲಿ ಡಿಜಿಟಲ್ ಸಲಕರಣೆಗಳು (ಮೊಬೈಲ್ ಫೋನ್ಗಳು ಅಥವಾ ಟ್ಯಾಬ್ಲೆಟ್ಗಳು), ವಿವಿಧ ಬ್ಯಾಂಕ್ಗಳ ಡೆಬಿಟ್ ಕಾರ್ಡ್ಗಳು, ಪಾಸ್ ಬುಕ್ಗಳು ಹಾಗೂ ಚೆಕ್ಬುಕ್ಗಳು ಮತ್ತಿತರ ಹಣಕಾಸು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಸೈಬರ್ ಅಪರಾಧಗಳನ್ನು ನಡೆಸುವುದ್ಕಾಗಿ ಅಮಾಯಕ ಯುವಜರನ್ನು ಆಗ್ನೇಯ ಏಶ್ಯದ ರಾಷ್ಟ್ರವಾದ ಲಾವೋಸ್ ನಲ್ಲಿರುವ ಗೋಲ್ಡನ್ ಟ್ರಯಾಂಗಲ್ ಪ್ರಾಂತಕ್ಕೆ ಕಳುಹಿಸುವ ಕ್ರಿಮಿನಲ್ ಸಂಚಿನಲ್ಲಿ ಶಾಮೀಲಾದ ಆರೋಪದಲ್ಲಿ ಕಮ್ರಾನ್ ಹೈದರ್ ಮತ್ತಿತರ ಆರೋಪಿಗಳ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಜಾಲವು ಲಾವೋಸ್ ನಲ್ಲಿ ಕಾರ್ಯಾಚರಿಸುತ್ತಿದ್ದು, ಯುರೋಪಿಯನ್ ಹಾಗೂ ಅಮೆರಿಕನ್ ನಾಗರಿಕರನ್ನು ಗುರಿಯಿರಿಸಿಕೊಂಡು ತಾನು ನೇಮಿಸಿಕೊಂಡ ಯುವಜನರಿಂದ ಬಲವಂತವಾಗಿ ಸೈಬರ್ ಅಪರಾಧಗಳನ್ನು ಮಾಡಿಸುತ್ತಿತ್ತು.
ಚೀನಿ ಮೂಲದ ಸೈಬರ್ ಅಪರಾಧ ಜಾಲದ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂತ್ರಸ್ತ ಯುವಜನರಿಂದ ಕ್ರಿಪ್ಟೊಕರೆನ್ಸಿ ವಾಲೆಟ್ಗಳ ಮೂಲಕ ಹಣ ಸುಲಿಗೆಯಲ್ಲಿ ಹೈದರ್ ಶಾಮೀಲಾಗಿದ್ದನೆಂದು ಎನ್ಐಎ ಮೂಲಗಳು ತಿಳಿಸಿವೆ.