ಎನ್ಐಎಯಿಂದ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯನ 4 ಸೊತ್ತು ಮುಟ್ಟುಗೋಲು
Photo: PTI
ಹೊಸದಿಲ್ಲಿ: ಮೂರು ರಾಜ್ಯಗಳಲ್ಲಿ ಲಾರೆನ್ಸ್ ಬಿಷ್ಣೋಯಿಯ ಸಂಘಟಿತ ಭಯೋತ್ಪಾದನೆ-ಅಪರಾಧ ತಂಡದ ಸದಸ್ಯರ ಮಾಲಕತ್ವದ ನಾಲ್ಕು ಸೊತ್ತುಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶನಿವಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದೇಶದಲ್ಲಿ ಭಯೋತ್ಪಾದಕರು-ಭೂಗತ ಪಾತಕಿಗಳು-ಮಾದಕ ವಸ್ತು ಕಳ್ಳ ಸಾಗಾಟಗಾರರ ನಿರ್ಮೂಲನೆ ಮಾಡುವ ದಿಶೆಯಲ್ಲಿ ಈ ಕಾರ್ಯಾಚರಣೆ ಪ್ರಮುಖ ಹೆಜ್ಜೆಯಾಗಿದೆ.
ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಹರ್ಯಾಣ, ಪಂಜಾಬ್ ಹಾಗೂ ಉತ್ತರಪ್ರದೇಶದಲ್ಲಿ ನಡೆಸಿದ ಸಂಘಟಿತ ಕಾರ್ಯಾಚರಣೆಯಲ್ಲಿ ಮೂರು ಸ್ಥಿರ ಹಾಗೂ ಒಂದು ಚರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಎಲ್ಲಾ ಸೊತ್ತುಗಳು ಭಯೋತ್ಪಾದನೆಯಿಂದ ದೊರೆತ ಆದಾಯವಾಗಿದೆ ಹಾಗೂ ಇದನ್ನು ಭಯೋತ್ಪಾದನೆಗೆ ಸಂಚು ನಡೆಸಲು ಹಾಗೂ ಗಂಭೀರ ಅಪರಾಧಗಳನ್ನು ಕಾರ್ಯಗತಗೊಳಿಸಲು ಬಳಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.
ಮುಟ್ಟುಗೋಲು ಹಾಕಿಕೊಳ್ಳಲಾದ ಸೊತ್ತುಗಳಲ್ಲಿ ಉತ್ತರಪ್ರದೇಶದಲ್ಲಿ ಭಯೋತ್ಪಾದನಾ ತಂಡಕ್ಕೆ ನೆರವು ನೀಡಿದ ವಿಕಾಸ್ ಸಿಂಗ್ ಗೆ ಸೇರಿದ ಲಕ್ನೋದ ಗೋಮತಿ ನಗರ್ ಎಕ್ಸ್ ಟೆನ್ ಶನ್ ನಲ್ಲಿರುವ ಫ್ಲ್ಯಾಟ್ ಕೂಡ ಸೇರಿದೆ.
ಈ ಕಾರ್ಯಾಚರಣೆಯಲ್ಲಿ ಪಂಜಾಬಿನ ಫಝಿಲ್ಕಾದ ಬಿಷ್ಣುಪುರ ಗ್ರಾಮದಲ್ಲಿ ಇತರ ಎರಡು ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಸೊತ್ತುಗಳು ಆರೋಪಿ ದಿಲೀಪ್ ಕುಮಾರ್ ಆಲಿಯಾಸ್ ಭೋಲಾ ಆಲಿಯಾಸ್ ದಿಲೀಪ್ ಬಿಷ್ಣೋಯಿಗೆ ಸೇರಿದೆ ಎಂದು ವಕ್ತಾರ ತಿಳಿಸಿದ್ದಾರೆ.