ಪನ್ನೂನ್ ಹತ್ಯೆಗೆ ಸಂಚು ಆರೋಪ: ನಿಖಿಲ್ ಗುಪ್ತಾ ಗಡೀಪಾರಿಗೆ ಝೆಕ್ ತಡೆ
ಗುರುಪತ್ವಂತ್ ಸಿಂಗ್ ಪನ್ನೂನ್ (Photo: NDTV)
ಹೊಸದಿಲ್ಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಪ್ರಯತ್ನ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಹೊತ್ತಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧದ ಗಡೀಪಾರು ಪ್ರಕ್ರಿಯೆಯನ್ನು ಝೆಕ್ ಗಣರಾಜ್ಯ ತಡೆ ವಿಧಿಸಿದೆ. ಅಮೆರಿಕಕ್ಕೆ ತಮ್ಮನ್ನು ಗಡೀಪಾರು ಮಾಡುವ ಪ್ರಕ್ರಿಯೆಯನ್ನು ತಡೆಯಬೇಕು ಎಂದು ಕೋರಿ ಗುಪ್ತಾ ಕೋರ್ಟ್ ನಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಅಮಾನತುಗೊಳಿಸಲಾಗಿದೆ.
"ಈ ಮಾಹಿತಿಯನ್ನು ನಾನು ದೃಢಪಡಿಸಬಲ್ಲೆ. ಸಂವಿಧಾನ ಕೋರ್ಟ್ ಈ ಸಂವಿಧಾನಾತ್ಮಕ ದೂರನ್ನು ಇತ್ಯರ್ಥಪಡಿಸುವವರೆಗೆ ಗಡೀಪಾರು ಪ್ರಕ್ರಿಯೆ ಅಮಾನತುಗೊಳ್ಳಲಿದೆ" ಎಂದು ಝೆಕ್ ನ್ಯಾಯಾಂಗ ಸಚಿವಾಲಯ ವಕ್ತಾರ ವ್ಲಾದಿಮಿರ್ ರೆಪ್ಕಾ ಹೇಳಿದ್ದಾರೆ.
ಗುಪ್ತಾ ಗಡೀಪಾರು ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದ ಪರುಗ್ವೆ ಹೈಕೋರ್ಟ್ ಆದೇಶವನ್ನು ಆರೋಪಿ ಸಂವಿಧಾನ ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆಯೇ ಎಂದು ವಕ್ತಾರರನ್ನು ಕೇಳಲಾಗಿತ್ತು.
ಝೆಕ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂವಿಧಾನ ಕೋರ್ಟ್ ಅತ್ಯುನ್ನತ ನ್ಯಾಯಾಲಯವಾಗಿದ್ದು, ಇದರ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಂತಿಲ್ಲ. ಜೆಕ್ ಗಣರಾಜ್ಯ ಹಾಗೂ ಅಮೆರಿಕ ಗಡೀಪಾರು ಒಪ್ಪಂದ ಹೊಂದಿದ್ದು, ಇದರ ಅನ್ವಯ ಗುಪ್ತಾ ಗಡೀಪಾರಿಗೆ ಅಮೆರಿಕ ಆಗ್ರಹಿಸಿದೆ. ಭಾರತೀಯ ಅಧಿಕಾರಿಗಳ ಸೂಚನೆ ಮೇರೆಗೆ ಗುಪ್ತಾ ಈ ಕೃತ್ಯ ಎಸಗಿದ್ದರು ಎನ್ನುವ ಆರೋಪ ಇದೆ. ಝೆಕ್ ಅಧಿಕಾರಿಗಳು ಇವರನ್ನು ಪರುಗ್ವೆಯಿಂದ ಜೂನ್ 30ರಂದು ಆಗಮಿಸುವ ವೇಳೆ ಬಂಧಿಸಿದ್ದರು.
ಪರುಗ್ವೆ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಗುಪ್ತಾ ಪರ ವಕೀಲ ಕಳೆದ ತಿಂಗಳು ಹೇಳಿಕೆ ನೀಡಿದ್ದರು ಹಾಗೂ ಅಮೆರಿಕಕ್ಕೆ ಗಡೀಪಾರು ಮಾಡದಂತೆ ನ್ಯಾಯಾಂಗ ಸಚಿವರನ್ನು ಕೋರಿದ್ದರು