ಮುಂಬೈ | ಮುಸ್ಲಿಂ ಬೀದಿ ಬದಿ ವ್ಯಾಪಾರಿಗಳಿಗೆ ಹಲ್ಲೆ: 9 ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ (credit: freepressjournal.in)
ಮುಂಬೈ: ದಾದರ್ ಮಾರುಕಟ್ಟೆ ಪ್ರದೇಶದಲ್ಲಿ ಮುಸ್ಲಿಂ ಬೀದಿ ವ್ಯಾಪಾರಿಗಳನ್ನು ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರವಿವಾರ ಮುಂಬೈ ಪೊಲೀಸರು 9 ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಬೀದಿ ಬದಿ ವ್ಯಾಪಾರಿ ಸೌರಭ್ ಮಿಶ್ರಾ ಎಂಬವರು ನೀಡಿದ ದೂರನ್ನು ಆಧರಿಸಿ, ಬಿಜೆಪಿ ನಾಯಕಿ ಅಕ್ಷತಾ ತೆಂಡೂಲ್ಕರ್ ಹಾಗೂ ಇನ್ನೂ ಎಂಟು ಮಂದಿಯ ವಿರುದ್ಧ ಶಿವಾಜಿ ಪಾರ್ಕ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರ ಸೌರಭ್ ಮಿಶ್ರಾ ಪ್ರಕಾರ, ಆರೋಪಿಗಳು ವ್ಯಾಪಾರಿಗಳ ಆಧಾರ್ ಕಾರ್ಡ್ ನೋಡಬೇಕು ಎಂದು ಆಗ್ರಹಿಸಿದರು ಹಾಗೂ ಅವರ ಮೇಲೆ ಹಲ್ಲೆ ನಡೆಸುವುದಕ್ಕೂ ಮುನ್ನ, ಅವರ ಹೆಸರುಗಳನ್ನು ಕೇಳಿದರು ಎಂದು ಆರೋಪಿಸಲಾಗಿದೆ.
ಶುಕ್ರವಾರ ನಡೆದ ಈ ಘಟನೆ ಸಂಬಂಧ ಇದುವರೆಗೆ ಯಾವುದೇ ಆರೋಪಿಯನ್ನು ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದೂ ಹೇಳಿದ್ದಾರೆ.
ದಾದರ್ ನಲ್ಲಿನ ಶಿವಾಜಿ ಪಾರ್ಕ್ ಪ್ರದೇಶವು ಅವಿಭಜಿತ ಶಿವಸೇನೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಭದ್ರಕೋಟೆಯಾಗಿದೆ.