ಶ್ರೀಲಂಕಾ ನೌಕಾಪಡೆಯಿಂದ ಒಂಭತ್ತು ಭಾರತೀಯ ಮೀನುಗಾರರ ಬಂಧನ
Photo : NDTV
ಹೊಸದಿಲ್ಲಿ: ಶ್ರೀಲಂಕಾದ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಒಂಭತ್ತು ಭಾರತೀಯ ಮೀನುಗಾರರನ್ನು ನೌಕಾಪಡೆಯು ಸೋಮವಾರ ರಾತ್ರಿ ಬಂಧಿಸಿದೆ ಮತ್ತು ಅವರಿಗೆ ಸೇರಿದ ಎರಡು ಟ್ರಾಲರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆಯು ಮಂಗಳವಾರ ತಿಳಿಸಿದೆ. ಇದು ಈ ತಿಂಗಳಲ್ಲಿ ಇಂತಹ ಎರಡನೇ ಘಟನೆಯಾಗಿದೆ.
ತಮಿಳುನಾಡಿಗೆ ಸೇರಿದ ಈ ಮೀನುಗಾರರನ್ನು ಜಾಫ್ನಾದ ಡೆಲ್ಫ್ಟದ್ವೀಪದ ಬಳಿ ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆಯು ತಿಳಿಸಿದೆ.
ರಾಮನಾಥಪುರಂ ಜಿಲ್ಲೆಯ ಮಂಡಪಂ ನಿವಾಸಿಗಳಾದ ಈ ಮೀನುಗಾರರು ಸೋಮವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದರು,ರಾತ್ರಿ ಕಛತೀವು ಮತ್ತು ನೆಡುಂತೀವು ನಡುವೆ ಅವರನ್ನು ಬಂಧಿಸಲಾಗಿದೆ ಎಂದು ರಾಮನಾಥಪುರಂನಲ್ಲಿಯ ತಮಿಳುನಾಡು ಮೀನುಗಾರಿಕೆ ಅಧಿಕಾರಿಯೋರ್ವರು ತಿಳಿಸಿದರು.
ಬಂಧಿತ ಮೀನುಗಾರರು ಮತ್ತು ಟ್ರಾಲರ್ ಗಳನ್ನು ಕಂಕೆಸಂತುರೈ ಬಂದರಿಗೆ ತರಲಾಗಿದ್ದು,ಮುಂದಿನ ಕಾನೂನು ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕೆ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ಶ್ರೀಲಂಕಾ ನೌಕಾಪಡೆಯು ಹೇಳಿಕೆಯಲ್ಲಿ ತಿಳಿಸಿದೆ.
ಜು.9ರಂದು ಶ್ರೀಲಂಕಾ ನೌಕಾಪಡೆಯು ತನ್ನ ದೇಶದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 15 ಭಾರತೀಯ ಮೀನುಗಾರರನ್ನು ಬಂಧಿಸಿ,ಎರಡು ಟ್ರಾಲರ್ ಗಳನ್ನು ವಶಪಡಿಸಿಕೊಂಡಿತ್ತು.
ಭಾರತ ಮತ್ತು ಶ್ರೀಲಂಕಾಗಳ ಸಂಬಂಧಗಳಲ್ಲಿ ಮೀನುಗಾರರ ಸಮಸ್ಯೆ ವಿವಾದಾತ್ಮಕ ವಿಷಯವಾಗಿದೆ.
ಕಳೆದ ವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ನಡುವಿನ ಮಾತುಕತೆ ಸಂದರ್ಭದಲ್ಲೂ ಮೀನುಗಾರರ ವಿಷಯವು ಪ್ರಸ್ತಾವಗೊಂಡಿತ್ತು.
ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿಗಳು ಪಾಕ್ ಜಲಸಂಧಿಯಲ್ಲಿ ಮೀನುಗಾರಿಕೆ ನಡೆಸುವ ಭಾರತೀಯ ಮೀನುಗಾರರ ಮೇಲೆ ಗುಂಡುಗಳನ್ನೂ ಹಾರಿಸಿದ ಮತ್ತು ಅವರ ದೋಣಿಗಳನ್ನು ವಶಪಡಿಸಿಕೊಂಡ ಹಲವಾರು ಘಟನೆಗಳು ನಡೆದಿವೆ.
ಶ್ರೀಲಂಕಾವನ್ನು ತಮಿಳುನಾಡಿನಿಂದ ಬೇರ್ಪಡಿಸುವ ಕಿರಿದಾದ ಪಾಕ್ ಜಲಸಂಧಿಯು ಉಭಯ ದೇಶಗಳ ಮೀನುಗಾರರಿಗೆ ಸಮೃದ್ಧ ಮೀನುಗಾರಿಕೆ ತಾಣವಾಗಿದೆ.