ನಿಫಾ ಸೋಂಕಿನಿಂದ ಯುವಕ ಮೃತಪಟ್ಟ ಹಿನ್ನೆಲೆ: ಕೇರಳದ ಮಲಪ್ಪುರಂನಲ್ಲಿ ಮಾಸ್ಕ್ ಕಡ್ಡಾಯ
Photo: freepik
ಮಲಪ್ಪುರಂ (ಕೇರಳ): ನಿಫಾ ಸೋಂಕಿನಿಂದ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಮಲಪ್ಪುರಂ ಜಿಲ್ಲಾಡಳಿತ ಆದೇಶಿಸಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಮಾಸ್ಕ್ ಧರಿಸಬೇಕು ಎಂದು ಈ ಆದೇಶದಲ್ಲಿ ಸೂಚಿಸಲಾಗಿದೆ.
ವಾಂಡೂರ್ ಬಳಿಯ ತಿರುವಲಿಯಲ್ಲಿ ನಿಫಾ ಸೋಂಕಿನಿಂದ ಯುವಕನೋರ್ವ ಮೃತಪಟ್ಟಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಲಪ್ಪುರಂ ಜಿಲ್ಲಾಡಳಿತವು ಹಲವಾರು ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಹೇರಿದೆ.
ತಿರುವಲಿ ಗ್ರಾಮ ಪಂಚಾಯತಿಯ ವಾರ್ಡ್ ಸಂಖ್ಯೆ 4, 5, 6, ಮತ್ತು 7 ಹಾಗೂ ಮಾಂಪಡ್ ಗ್ರಾಮ ಪಂಚಾಯತಿಯ ವಾರ್ಡ್ ಸಂಖ್ಯೆ 7 ಅನ್ನು ಕಂಟೈನ್ ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ಜನರು ಸಾರ್ವಜನಿಕ ಸಮಾರಂಭಗಳನ್ನು ಏರ್ಪಡಿಸಬಾರದು ಹಾಗೂ ಗುಂಪು ಸೇರಬಾರದು ಎಂದು ಸಲಹೆ ನೀಡಲಾಗಿದೆ. ಈ ವಲಯಗಳಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ವ್ಯಾಪಾರ ಸಂಸ್ಥೆಗಳಿಗೆ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ತೆರೆದಿರಲು ಅವಕಾಶ ನೀಡಲಾಗಿದೆ.
ಮುಂದಿನ ಆದೇಶದವರೆಗೆ ಈ ವಲಯಗಳಲ್ಲಿನ ಶಾಲೆಗಳು, ಕಾಲೇಜುಗಳು, ಮದ್ರಸಾಗಳು, ಅಂಗನವಾಡಿಗಳು ಹಾಗೂ ಚಿತ್ರಮಂದಿರಗಳು ಮುಚ್ಚಿರಲಿವೆ.
ನಿಫಾ ಸೋಂಕಿನಿಂದ ಮೃತಪಟ್ಟ 24 ವರ್ಷ ವಯಸ್ಸಿನ ಯುವಕನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಹದಿನೈದು ಮಂದಿಯನ್ನು ನಿಗಾವಣೆಯಲ್ಲಿರಿಸಲಾಗಿದೆ.
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಫಾ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವ ಯುವಕನೊಂದಿಗೆ ನೇರ ಸಂಪರ್ಕಕ್ಕೆ ಬಂದಿರುವ ಸುಮಾರು 151 ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ.
ತಾನು ಮೃತಪಡುವುದಕ್ಕೂ ಮುನ್ನ ಆ ಯುವಕನು ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ ಹಾಗೂ ತನ್ನ ಗೆಳೆಯರೊಂದಿಗೆ ವಿವಿಧ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದ ಎಂದು ವರದಿಯಾಗಿದೆ.