ಎಲ್ಲಾ ಸರಕಾರಿ ಶಾಲೆಗಳಿಗೆ ಇಂಟರ್ನೆಟ್ ಸಂಪರ್ಕ; ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆ: ನಿರ್ಮಲಾ ಸೀತಾರಾಮನ್ ಘೋಷಣೆ

ನಿರ್ಮಲಾ ಸೀತಾರಾಮನ್ | PC : PTI
ಹೊಸದಿಲ್ಲಿ: ಶೈಕ್ಷಣಿಕ ವಲಯಕ್ಕೆ ಸರಣಿ ಉಪಕ್ರಮಗಳನ್ನು ಪ್ರಕಟಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸರಕಾರದಲ್ಲಿ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೆ ಬಜೆಟ್ ಮಂಡಿಸಿದರು. ಇದು ಮೋದಿ ಸರಕಾರದ ಮೂರನೆ ಅವಧಿಯ ಎರಡನೆ ಪೂರ್ಣ ಬಜೆಟ್ ಆಗಿದೆ.
“ಕುತೂಹಲ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ಭಾಷೆಯಲ್ಲಿ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಭಾರತೀಯ ಭಾಷಾ ಪುಸ್ತಕ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾವ ಹೊಂದಿದ್ದೇವೆ. ಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲಾಗುವುದು” ಎಂದು ಅವರು ಪ್ರಕಟಿಸಿದ್ದಾರೆ.
ಐಐಟಿಗಳಲ್ಲಿನ ಸಾಮರ್ಥ್ಯವನ್ನು ಹೆಚ್ಚಗೊಳಿಸುವ ಕುರಿತೂ ನಿರ್ಮಲಾ ಸೀತಾರಾಮನ್ ಮಾತನಾಡಿದರು. ಕಳೆದ 10 ವರ್ಷಗಳಲ್ಲಿ 23 ಐಐಟಿಗಳ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇ. 100ರಷ್ಟು ಹೆಚ್ಚಳಗೊಳಿಸಲಾಗಿದೆ. 2014ರ ನಂತರ ನಿರ್ಮಿಸಲಾಗಿರುವ 5 ಐಐಟಿಗಳ 6,500 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಮೌಲಸೌಕರ್ಯಗಳನ್ನು ಕಲ್ಪಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಆನ್ ಲೈನ್ ವೇದಿಕೆಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರ ಏಳಿಗೆಗಾಗಿ ಸಾಮಾಜಿಕ ಭದ್ರತಾ ಯೋಜನೆಯನ್ನೂ ಜಾರಿಗೊಳಿಸಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.