ಸತತ 8ನೇ ಬಜೆಟ್ ಮಂಡಿಸಿ ಇತಿಹಾಸ ಸೃಷ್ಟಿಸಿದ ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ | PC : PTI
ಹೊಸದಿಲ್ಲಿ : ಸತತ ಎಂಟನೇ ಬಾರಿ ಬಜೆಟ್ ಮಂಡಿಸುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಇತಿಹಾಸ ಸೃಷ್ಟಿಸಿದರು. ಅದೂ ಅಲ್ಲದೆ, ಪೂರ್ಣಾವಧಿ ಪೂರೈಸಿದ ಮೊದಲ ಮಹಿಳಾ ಹಣಕಾಸು ಸಚಿವೆಯೂ ಅವರಾಗಿದ್ದಾರೆ. 2019ರಿಂದ, ಅಂದರೆ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಎರಡನೇ ಅವಧಿಯಿಂದ ಅವರು ದೇಶದ ಹಣಕಾಸು ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಧಾನಿಯಾಗಿ ಮೋದಿಯವರ ಮೂರನೇ ಅವಧಿಯಲ್ಲೂ ಹಣಕಾಸು ಸಚಿವೆಯಾಗಿ ಮುಂದುವರಿದಿರುವ ನಿರ್ಮಲಾ ಸೀತಾರಾಮನ್, 10 ಕೇಂದ್ರ ಬಜೆಟ್ಗಳನ್ನು ಮಂಡಿಸಿದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ಸಾರ್ವಕಾಲಿಕ ದಾಖಲೆಯ ಸನಿಹಕ್ಕೆ ಹೋಗುತ್ತಿದ್ದಾರೆ.
ದೇಸಾಯಿ ಎರಡು ಪ್ರತ್ಯೇಕ ಅವಧಿಗಳಲ್ಲಿ ತನ್ನ ದಾಖಲೆಯ ಬಜೆಟ್ಗಳನ್ನು ಮಂಡಿಸಿದ್ದಾರೆ. 1959 ಮತ್ತು 1964ರ ನಡುವಿನ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದಾಗ ಅವರು ಆರು ಬಜೆಟ್ಗಳನ್ನು ಮಂಡಿಸಿದ್ದರೆ, 1967 ಮತ್ತು 1969ರ ನಡುವಿನ ಅವಧಿಯಲ್ಲಿ ಇನ್ನೂ ನಾಲ್ಕು ಬಜೆಟ್ಗಳನ್ನು ಮಂಡಿಸಿದರು. ಆದರೆ, ನಿರ್ಮಲಾ 2019ರಿಂದ ನಿರಂತರವಾಗಿ ಬಜೆಟ್ಗಳನ್ನು ಮಂಡಿಸಿದ್ದಾರೆ.
ಪಿ. ಚಿದಂಬರಮ್ ಬಹು ಅವಧಿಗಳಲ್ಲಿ ಒಂಭತ್ತು ಬಜೆಟ್ಗಳನ್ನು ಮಂಡಿಸಿದರೆ, ಪ್ರಣಬ್ ಮುಖರ್ಜಿ 8 ಬಜೆಟ್ಗಳನ್ನು ಕೊಟ್ಟಿದ್ದಾರೆ.
ಮನಮೋಹನ್ ಸಿಂಗ್ 1990ರ ದಶಕದಲ್ಲಿ ಹಣಕಾಸು ಸಚಿವರಾಗಿ ಐದು ಬಜೆಟ್ಗಳನ್ನು ಮಂಡಿಸಿದ್ದಾರೆ.