ಡಾಲರ್ ಬಲಿಷ್ಠವಾಗಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ: ನಿರ್ಮಲಾ ಸೀತಾರಾಮನ್
ಇತರ ಕರೆನ್ಸಿಗಳ ಮುಂದೆ ರೂ. ಮೌಲ್ಯ ಸ್ಥಿರವಾಗಿದೆ

ನಿರ್ಮಲಾ ಸೀತಾರಾಮನ್ | PC : PTI
ಹೊಸದಿಲ್ಲಿ: ಭಾರತೀಯ ರೂಪಾಯಿ ಮೌಲ್ಯದ ಕುಸಿತದ ಕುರಿತ ಟೀಕೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ತಳ್ಳಿಹಾಕಿದ್ದಾರೆ.
ಅಮೆರಿಕ ಡಾಲರ್ ಬಲಿಷ್ಠಗೊಂಡಿದ್ದರಿಂದಾಗಿ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ. ಆದರೆ ಇತರ ಕರೆನ್ಸಿಗಳ ಮುಂದೆ ಅದರ ಮೌಲ್ಯ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ರವಿವಾರ ಸಂದರ್ಶನ ನೀಡಿದ ಅವರು ಕಳೆದ ಮೂರು ತಿಂಗಳುಗಳಲ್ಲಿ ರೂಪಾಯಿ ಮೌಲ್ಯದಲ್ಲಿ ಶೇ.3ರಷ್ಟು ಕಳವಳದ ವಿಷಯವಾಗಿದೆ. ಇದರಿಂದಾಗಿ ಆಮದು ದುಬಾರಿಯಾಗಿದೆ. ಆದರೆ ಭಾರತೀಯ ಕರೆನ್ಸಿ ಸರ್ವಾಂಗೀಣವಾಗಿ ದುರ್ಬಲಗೊಂಡಿದೆಯೆಂಬ ಟೀಕೆಯನ್ನು ಅವರು ತಳ್ಳಿಹಾಕಿದ್ದಾರೆ.
‘ನನಗೆ ಕಳವಳವಿದೆ. ಆದರೆ ‘ರೂಪಾಯಿ ದುರ್ಬಲವಾಗಿದೆಯೆಂಬ ಟೀಕೆಯನ್ನು ನಾನು ಒಪ್ಪುವುದಿಲ್ಲ !’. ನಮ್ಮ ‘ಸ್ಥೂಲ ಆರ್ಥಿಕತೆ’ (ಮ್ಯಾಕ್ರೋ ಇಕನಾಮಿಕ್)ಯ ಮೂಲಭೂತ ತತ್ವಗಳು ಗಟ್ಟಿಯಾಗಿವೆ. ಒಂದು ವೇಳೆ ಮೂಲಭೂತತತ್ವಗಳು ದುರ್ಬಲವಾಗಿದ್ದಲ್ಲಿ ರೂಪಾಯಿ ಮೌಲ್ಯವು ಎಲ್ಲಾ ಕರೆನ್ಸಿಗಳ ವಿರುದ್ಧ ಸ್ಥಿರವಾಗಿರುವುದಿಲ್ಲ’’ ಎಂದು ಆಕೆ ತಿಳಿಸಿದ್ದಾರೆ.