ದತ್ತಾಂಶ ರಕ್ಷಣೆ ಕಾಯ್ದೆ ಆರ್ಟಿಐ ಅನ್ನು ದುರ್ಬಲಗೊಳಿಸುತ್ತದೆ ಎಂದು ನೀತಿ ಆಯೋಗ ಎಚ್ಚರಿಕೆ ನೀಡಿತ್ತು: ವರದಿ
ಸಾಂದರ್ಭಿಕ ಚಿತ್ರ (credit: tribuneindia.com)
ಹೊಸದಿಲ್ಲಿ: ಮಾಹಿತಿ ಹಕ್ಕು(ಆರ್ಟಿಐ) ಕಾಯ್ದೆಗೆ ತಿದ್ದುಪಡಿಯನ್ನು ಪ್ರಸ್ತಾವಿಸಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆಯ ನಿಬಂಧನೆಗಳಿಗೆ ನೀತಿ ಆಯೋಗವು ಆಕ್ಷೇಪವನ್ನು ವ್ಯಕ್ತಪಡಿಸಿತ್ತು ಎಂದು ಮಾಧ್ಯಮ ವರದಿಯೊಂದು ಬಹಿರಂಗಗೊಳಿಸಿದೆ.
ನೀತಿ ಆಯೋಗವು 2023, ಜ.16ರಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು ದತ್ತಾಂಶ ರಕ್ಷಣೆ ಕಾಯ್ದೆಯು ಆರ್ಟಿಐನ್ನು ದುರ್ಬಲಗೊಳಿಸಬಹುದು, ಹೀಗಾಗಿ ಕಾಯ್ದೆಯನ್ನು ಅದರ ಪ್ರಸ್ತುತ ರೂಪದಲ್ಲಿ ಅಂಗೀಕರಿಸಬಾರದು ಎಂದು ಆಗ್ರಹಿಸಿತ್ತು ಎಂದು ಆರ್ಟಿಐ ಉತ್ತರವನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ.
ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆ,2023ನ್ನು ಸಂಸತ್ತು ಆಗಸ್ಟ್ 2023ರಲ್ಲಿ ಅಂಗೀಕರಿಸಿದ್ದು,ಅದೇ ತಿಂಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅದಕ್ಕೆ ಅಂಕಿತ ಹಾಕಿದ್ದರು. ಕಾಯ್ದೆಯಡಿ ನಿಯಮಗಳನ್ನು ಇನ್ನಷ್ಟೇ ಅಧಿಸೂಚಿಸಬೇಕಿದೆ.
ಕಾಯ್ದೆಯ ಅಂಗೀಕಾರದ ಬಳಿಕ ಆರ್ಟಿಐ ಕಾರ್ಯಕರ್ತರು ಮತ್ತು ತಜ್ಞರು ಅದು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ದತ್ತಾಂಶ ರಕ್ಷಣೆ ಕಾಯ್ದೆಯು ಆರ್ಟಿಐ ಕಾಯ್ದೆಯ ಕಲಂ 8(1)(ಜೆ) ಅನ್ನು ತಿದ್ದುಪಡಿಗೊಳಿಸುತ್ತದೆ ಎನ್ನುವುದು ಅವರ ಆತಂಕಕ್ಕೆ ಕಾರಣವಾಗಿತ್ತು.
ಪ್ರಸ್ತುತ, ಯಾರದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸುವುದು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಯ ಮೇಲೆ ಪರಿಣಾಮ ಬೀರದಿದ್ದರೆ ಅಥವಾ ಮಾಹಿತಿಯ ಬಹಿರಂಗವು ವ್ಯಕ್ತಿಯ ಖಾಸಗಿತನವನ್ನು ಅನಗತ್ಯವಾಗಿ ಉಲ್ಲಂಘಿಸುತ್ತಿದ್ದರೆ ಮತ್ತು ಇಂತಹ ಬಹಿರಂಗಗೊಳಿಸುವಿಕೆಯು ವ್ಯಾಪಕ ಸಾರ್ವಜನಿಕ ಹಿತಾಸಕ್ತಿಯನ್ನು ಸಮರ್ಥಿಸದಿದ್ದರೆ;ಸಾರ್ವಜನಿಕ ಪ್ರಾಧಿಕಾರವು ಇಂತಹ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಕಲಂ 8(1)(ಜೆ) ತಡೆಯುತ್ತದೆ.
ಆದರೆ,ದತ್ತಾಂಶ ರಕ್ಷಣೆ ಕಾಯ್ದೆಯ ಉಪ ನಿಬಂಧನೆ 44(3) ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸುವುದರಿಂದ ಸಾರ್ವಜನಿಕ ಪ್ರಾಧಿಕಾರಕ್ಕೆ ಸಂಪೂರ್ಣ ವಿನಾಯತಿಯನ್ನು ನೀಡಲು ಆರ್ಟಿಐ ಕಾಯ್ದೆಯ ಕಲಂ 8(1)(ಜೆ)ಗೆ ತಿದ್ದುಪಡಿಯನ್ನು ಮಾಡುತ್ತದೆ ಮತ್ತು ತನ್ಮೂಲಕ ಈ ಕಲಮ್ನಲ್ಲಿಯ ಸಾರ್ವಜನಿಕ ಚಟುವಟಿಕೆ/ಸಾರ್ವಜನಿಕ ಹಿತಾಸಕ್ತಿ ವಿನಾಯಿತಿಗಳನ್ನು ತೆಗೆದುಹಾಕುತ್ತದೆ.
ಉಪ ನಿಯಮ 44(3)ಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದ ನೀತಿ ಆಯೋಗವು,ತಿದ್ದುಪಡಿಯು ‘ಸ್ಥಿತಿಯನ್ನು ಪರಿಶೀಲಿಸುವ’ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ ಮತ್ತು ಇದು ಅಂತಿಮವಾಗಿ ಆರ್ಟಿಐ ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಎಂದು ತಿಳಿಸಿತ್ತು.
ಆರ್ಟಿಐ ಕಾಯ್ದೆಯ ಜಾರಿ ಏಜೆನ್ಸಿಯಾದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಕಾಯ್ದೆಗೆ ತಿದ್ದುಪಡಿ ಕುರಿತು ಕಳವಳಗಳನ್ನು ವ್ಯಕ್ತಪಡಿಸಿರಲಿಲ್ಲ,ಹೀಗಾಗಿ ನೀತಿ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಲಾಗಿರಲಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ.