ಎನ್ ಡಿ ಎ ಯ ಹೊಸ್ತಿಲಲ್ಲಿ ನಿತೀಶ್, ಹೇಗಿದೆ ಬಿಹಾರ ವಿಧಾನ ಸಭೆಯ ಸಂಖ್ಯಾಬಲ?
Photo: PTI
ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಜೊತೆಗಿನ ತಮ್ಮ ಪಕ್ಷದ ಜನತಾ ದಳ (ಯುನೈಟೆಡ್) ನ ಎರಡು ವರ್ಷಗಳ ಒಡನಾಟವನ್ನು ಕೊನೆಗೊಳಿಸಿ ನಿತೀಶ್ ಕುಮಾರ್ ರವಿವಾರ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರೀಕ್ಷೆಯಿದೆ. ಆ ಬಳಿಕ ನಿತೀಶ್ ಕುಮಾರ್ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಮೈತ್ರಿಗೆ ಮರಳುವ ಸಾಧ್ಯತೆಯಿದೆ. ಈಗಾಗಲೇ ಬೇಕಾದ ಬೆಂಬಲ ಪತ್ರವನ್ನು ಜೆಡಿಯು ಸಂಗ್ರಹಿಸಿದೆ ಎನ್ನಲಾಗಿದೆ. ಮೂರು ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಯು ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ನಿತೀಶ್ ಕುಮಾರ್ ಅವರು 2022 ರಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದು, ಲಾಲು ಪ್ರಸಾದ್ ಯಾದವ್ ಅವರ RJD, ಕಾಂಗ್ರೆಸ್ ಮತ್ತು ಎಡ ಪಕ್ಷಗಳೊಂದಿಗೆ 'ಮಹಾಘಟ ಬಂಧನ್' ನಲ್ಲಿ ಸರ್ಕಾರವನ್ನು ರಚಿಸಿದರು.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 79 ಶಾಸಕರನ್ನು ಹೊಂದಿರುವ ಆರ್ ಜೆಡಿ ಪ್ರಸ್ತುತ ಏಕೈಕ ದೊಡ್ಡ ಪಕ್ಷವಾಗಿದೆ. ಸರಳ ಬಹುಮತಕ್ಕೆ ಆರ್ ಜೆ ಡಿ ಗೆ ಇನ್ನೂ 43 ಶಾಸಕರ ಬೆಂಬಲ ಅಗತ್ಯವವಿದೆ.
78 ಶಾಸಕರಿರುವ ಬಿಜೆಪಿ ವಿಧಾನಸಭೆಯಲ್ಲಿ ಎರಡನೇ ದೊಡ್ಡ ಪಕ್ಷವಾಗಿದೆ.
ಬಿಹಾರ ವಿಧಾನಸಭೆಯಲ್ಲಿ ಬಲಾಬಲ ಹೇಗಿದೆ?
ಆರ್ ಜೆ ಡಿ - 79 ಶಾಸಕರು
ಬಿಜೆಪಿ - 78 ಶಾಸಕರು
ಜೆಡಿ(ಯು) - 45
ಕಾಂಗ್ರೆಸ್ - 19
CPI (M-L) - 12
ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) - 4
ಸಿಪಿಐ - 2
ಸಿಪಿಐ (ಎಂ) - 2
AIMIM - 1
ಸ್ವತಂತ್ರ ಶಾಸಕ - 1
ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಸರ್ಕಾರ ರಚಿಸಬಹುದೇ?
ನಿತೀಶ್ ಕುಮಾರ್ ಮತ್ತು ಬಿಜೆಪಿ ಕೈಜೋಡಿಸಿದರೆ ನೂತನ ಮೈತ್ರಿಕೂಟಕ್ಕೆ 123 ಸಂಖ್ಯಾಬಲ ಬರುತ್ತದೆ. ಅಂದರೆ ಸರ್ಕಾರ ರಚಿಸಲು ಬೇಕಾಗಿರುವ ಸರಳ ಬಹುಮತಕ್ಕಿಂತ ಒಂದು ಸಂಖ್ಯೆ ಹೆಚ್ಚು. ಇದರೊಂದಿಗೆ ಬಿಜೆಪಿಗೆ ಹಿಂದೂಸ್ತಾನಿ ಅವಾಮ್ ಮೋರ್ಚಾ ಬೆಂಬಲ ನೀಡಲಿದೆ. ಇದು ನೂತನ ಮೈತ್ರಿಕೂಟಕ್ಕೆ 4 ಸಂಖ್ಯೆಗಳ ಹೆಚ್ಚುವರಿ ಲಾಭ ನೀಡಲಿದೆ. ಆ ಮೂಲಕ ಬಹುಮತ ಸಾಬೀತುಪಡಿಸಲು ಸುಲಭವಾಗಿದೆ.
ರಾಜ್ಯದ ಎಲ್ಲಾ ಪಕ್ಷದ ಶಾಸಕರು ಈಗಾಗಲೇ ನಿತೀಶ್ ಕುಮಾರ್ ಅವರಿಗೆ ಬೆಂಬಲ ಪತ್ರ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ಎನ್ಡಿಟಿವಿಗೆ ತಿಳಿಸಿವೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಬದಲು, ಆರ್ ಜೆಡಿ ಸಚಿವರನ್ನು ಬದಲಿಸುವ ಮೂಲಕ ಬಿಹಾರ ಸಚಿವ ಸಂಪುಟವನ್ನು ಪುನರ್ ರಚಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ.
ನಿತೀಶ್ ಕುಮಾರ್ ನಿರ್ಗಮಿಸಿದರೆ 'ಮಹಾಘಟಬಂಧನ್' ಏನಾಗುತ್ತದೆ?
ಜೆಡಿಯು ಆಡಳಿತಾರೂಢ ಸಮ್ಮಿಶ್ರ ಸರಕಾರದಿಂದ ಹೊರನಡೆದರೆ ಎಂಟು ಶಾಸಕರ ಕೊರತೆಯಾಗಲಿದೆ. ಆರ್ ಜೆಡಿ ನಾಯಕ ಮತ್ತು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸರ್ಕಾರ ರಚನೆಗೆ ಹಕ್ಕು ಸಾಧಿಸುವ ಬಗ್ಗೆ ಸುಳಿವು ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಮಹಾಘಟ ಬಂಧನ್ ಸದಸ್ಯರ ಸಂಖ್ಯೆ 114ಕ್ಕೆ ಕುಸಿಯುತ್ತದೆ. ಸರಳ ಬಹುಮತಕ್ಕೆ 8 ಶಾಸಕರ ಬೆಂಬಲ ಬೇಕಾಗಲಿದೆ. ಮೂಲಗಳ ಪ್ರಕಾರ, ಬಿಹಾರದಲ್ಲಿ ಇನ್ನೂ ಸಂಖ್ಯೆಗಳ ಆಟ ಪ್ರಾರಂಭವಾಗಿಲ್ಲ ಎಂದು ತೇಜಸ್ವಿ ಯಾದವ್ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.