ನಿತೀಶ್ ಕುಮಾರ್ ಭಂಗಿಯ ನಶೆಯಲ್ಲಿ ವಿಧಾನಸಭೆಗೆ ಬರುತ್ತಾರೆ: ರಾಬ್ರಿ ದೇವಿ ಆರೋಪ

ಪಾಟ್ನಾ: “ನಿತೀಶ್ ಕುಮಾರ್ ಭಂಗಿಯ ನಶೆಯಲ್ಲಿ ವಿಧಾನಸಭೆಗೆ ಬರುತ್ತಾರೆ” ಎಂದು ವಿಧಾನ ಪರಿಷತ್ ಕಲಾಪದಲ್ಲಿ ಅವರೊಂದಿಗೆ ಮಾತಿನ ಚಕಮಕಿ ನಡೆದ ನಂತರ ಬಿಹಾರ ವಿಧಾನ ಪರಿಷತ್ ವಿಪಕ್ಷ ನಾಯಕಿ ರಾಬ್ರಿ ದೇವಿ ಆರೋಪಿಸಿದ್ದಾರೆ.
ಇದಕ್ಕೂ ಮುನ್ನ, ಬುಧವಾರದಂದು ಮುಖ್ಯಂಮಂತ್ರಿ ನಿತೀಶ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ನಡುವಿನ ಅಭೂತಪೂರ್ವ ಮಾತಿನ ಚಕಮಕಿಗೆ ಬಿಹಾರ ವಿಧಾನ ಪರಿಷತ್ ಸಾಕ್ಷಿಯಾಯಿತು. ಸದ್ಯ ರಾಬ್ರಿ ದೇವಿ ಬಿಹಾರ ವಿಧಾನ ಪರಿಷತ್ ವಿಪಕ್ಷ ನಾಯಕಿಯಾಗಿದ್ದಾರೆ.
ನಂತರ, ಇನ್ನಿತರ ವಿರೋಧ ಪಕ್ಷಗಳ ಸದಸ್ಯರೊಂದಿಗೆ ಸದನದಿಂದ ಹೊರಗೆ ಬಂದ ರಾಬ್ರಿ ದೇವಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಭಂಗಿಯ ನಶೆಯಲ್ಲಿದ್ದಾರೆ ಎಂದು ಮಾಧ್ಯಮಗಳೆದುರು ಆರೋಪಿಸಿದರು. ಇದೇ ವೇಳೆ, ಮಾನಸಿಕವಾಗಿ ಅಸ್ಥಿರವಾಗಿರುವ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ರಾಬ್ರಿ ದೇವಿಯ ಪುತ್ರ ಹಾಗೂ ವಿಧಾನಸಭಾ ವಿಪಕ್ಷ ನಾಯಕ ತೇಜಸ್ವಿ ಯಾದವ್ ಆಗ್ರಹಿಸಿದರು.
ನನ್ನ ಪ್ರಶ್ನೆಗೆ ಸರಕಾರ ನೀಡಿರುವ ಉತ್ತರದಿಂದ ನನಗೆ ಸಮಾಧಾನವಾಗಿಲ್ಲ ಎಂದು ಸದನದ ಗಮನಕ್ಕೆ ತರಲು ಆರ್ಜೆಡಿ ಮೈತ್ರಿಪಕ್ಷವಾದ ಸಿಪಿಐ(ಎಂಎಲ್)ನ ವಿಧಾನ ಪರಿಷತ್ ಸದಸ್ಯೆ ಶಶಿ ಯಾದವ್ ತಮ್ಮ ಆಸನದಿಂದ ಎದ್ದು ನಿಂತಾಗ, ಈ ಮಾತಿನ ಚಕಮಕಿ ನಡೆಯಿತು.
ಆದರೆ, ಮೇಲ್ಮನೆಯ ಸದಸ್ಯರೂ ಆಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, “ಸರಕಾರವು ಸಾಕಷ್ಟು ಕೆಲಸ ಮಾಡುತ್ತಿದೆ. ಈ ಹಿಂದಿನ ಸರಕಾರಗಳು ಏನೂ ಮಾಡಿರಲಿಲ್ಲ” ಎಂದು ಹೇಳಿಕೆ ನೀಡಿದರು.
ಇದರಿಂದ ಕುಪಿತಗೊಂಡ ರಾಬ್ರಿ ದೇವಿ, “ನೀವು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಯಾವುದೇ ಕೆಲಸಗಳಾಗಿಲ್ಲ ಎಂದು ಹೇಳುತ್ತಿದ್ದೀರಿ. ಹಾಗಾದರೆ, ದಯವಿಟ್ಟು ಈ ಹಿಂದಿನ ಅವಧಿಯ ದಾಖಲೆಗಳನ್ನು ಮಂಡಿಸುವಂತೆ ಸೂಚಿಸಿ. ನಿಮಗೆ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ” ಎಂದು ಹರಿಹಾಯ್ದರು.
ಅದಕ್ಕೆ ಪ್ರತಿಯಾಗಿ, ತಮ್ಮ ಆಸನದಿಂದ ಎದ್ದು ನಿಂತ ನಿತೀಶ್ ಕುಮಾರ್, ತಮ್ಮ ಮಾತನ್ನು ಆಕ್ರೋಶದಿಂದ ಪುನರುಚ್ಚರಿಸಲು ಪ್ರಾರಂಭಿಸಿದರು.
ನಿತೀಶ್ ಕುಮಾರ್ ಮಾತಿಗೆ ವ್ಯಂಗ್ಯದ ತಿರುಗೇಟು ನೀಡಿದ ರಾಬ್ರಿ ದೇವಿ, “ನಿಮ್ಮ ಪ್ರಕಾರ, 2005ರಲ್ಲಿ ನೀವು ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ಮಹಿಳೆಯರು ಬಟ್ಟೆಗಳನ್ನೇ ಧರಿಸುತ್ತಿರಲಿಲ್ಲವೆ?” ಎಂದು ತಿವಿದರು. ಇತ್ತೀಚೆಗೆ ತಮ್ಮ ಸರಕಾರ ಹೇಗೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ಎಂಬುದನ್ನು ಬಲವಾಗಿ ಪ್ರತಿಪಾದಿಸಲು ಜೆಡಿಯು ಅಧ್ಯಕ್ಷರೂ ಆದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ್ದ ಲೋಕಾಭಿರಾಮದ ಹೇಳಿಕೆಗೆ ಪ್ರತಿಯಾಗಿ ರಾಬ್ರಿ ದೇವಿ ಹಾಗೆ ವ್ಯಂಗ್ಯ ಮಾಡಿದರು.
ಆದರೆ, ರಾಬ್ರಿ ದೇವಿಯನ್ನು ಸಮಾಧಾನಪಡಿಸಲು ಮುಂದಾದ ನಿತೀಶ್ ಕುಮಾರ್, ತಾನು ಮಹಿಳೆಯರ ಬಗ್ಗೆ ಅಗೌರವಯುತವಾಗಿ ನಡೆದುಕೊಂಡಿದ್ದೇನೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿ ಹಾಕಿದರು.