ನಿತೀಶ್ ಕುಮಾರ್ ಜಾತಿ ಜನಗಣತಿ ವಿಷಯವನ್ನು ಎತ್ತಿದಾಗ ರಾಹುಲ್ ಗಾಂಧಿ ಮೌನವಾಗಿದ್ದರು: ಜೆಡಿ(ಯು) ಆರೋಪ

File Photo: PTI
ಹೊಸದಿಲ್ಲಿ : ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ಸಭೆಗಳಲ್ಲಿ ಜನಗಣತಿ ವಿಷಯವನ್ನು ಎತ್ತಿದಾಗ ರಾಹುಲ್ ಗಾಂಧಿ ಮೌನವಾಗಿದ್ದರು ಎಂದು ಜನತಾದಳ (ಯುನೈಟೆಡ್) ರವಿವಾರ ಆರೋಪಿಸಿದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯದ ಜಾತಿ ಗಣತಿ ಅಂಕಿ ಅಂಶಗಳನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಜೆಡಿ(ಯು) ಪ್ರಶ್ನಿಸಿದೆ.
ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ನಡೆಸಿದ ಜಾತಿ ಸಮೀಕ್ಷೆಯನ್ನು ನಕಲಿ ಕಾರ್ಯರೂಪ ಎಂದು ರಾಹುಲ್ ಗಾಂಧಿ ಟೀಕಿಸಿದ ಒಂದು ದಿನದ ನಂತರ, ರಾಷ್ಟ್ರವ್ಯಾಪಿ ಜಾತಿ ಜನಗಣತಿಗೆ ಪ್ರಚಾರ ಮಾಡಿದ ಜೆಡಿ(ಯು) ಕಾರ್ಯಾಧ್ಯಕ್ಷ ಮತ್ತು ಸಂಸದ ಸಂಜಯ್ ಝಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಝಾ, "ಇದಕ್ಕಿಂತ ದೊಡ್ಡ ಬೂಟಾಟಿಕೆ ಇನ್ನೊಂದಿಲ್ಲ. ಹಲವಾರು ಸ್ಥಳಗಳಲ್ಲಿ ನಡೆದ ಇಂಡಿಯಾ ಮೈತ್ರಿ ಕೂಟದ ಸಭೆಗಳಲ್ಲಿ ನಿತೀಶ್ ಕುಮಾರ್ ಜಾತಿ ಜನಗಣತಿಯ ಪರವಾಗಿ ಬಲವಾಗಿ ಮತ್ತು ತಾರ್ಕಿಕವಾಗಿ ಮಾತನಾಡುತ್ತಿದ್ದಾಗ ರಾಹುಲ್ ಗಾಂಧಿ ಮೌನವಾಗಿರುವುದಕ್ಕೆ ನಾನು ಸಾಕ್ಷಿಯಾಗಿದ್ದೆ" ಎಂದು ಹೇಳಿದರು.
ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ವಿರೋಧ ಪಕ್ಷಗಳ ಮೈತ್ರಿಕೂಟದೊಂದಿಗೆ ಸಂಬಂಧ ಕಡಿದುಕೊಂಡು ಬಿಜೆಪಿಯೊಂದಿಗೆ ಕೈಜೋಡಿಸುವ ಮೊದಲು ಇಂಡಿಯಾ ಮೈತ್ರಿಕೂಟದ ಭಾಗವಾಗಿತ್ತು.
ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರರಾಗಿದ್ದಾಗ ಬಿಹಾರದ ಜಾತಿ ಸಮೀಕ್ಷೆಯನ್ನು ನಡೆಸಲಾಯಿತು ಮತ್ತು ಅದರ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಯಿತು.
ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ಸಮರ್ಥಿಸಿಕೊಂಡ ಅವರು, 1931 ರ ನಂತರ ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಹೆಚ್ಚಿಸಲು ವಿವಿಧ ಜಾತಿಗಳ ಜನಸಂಖ್ಯೆಯನ್ನು ವೈಜ್ಞಾನಿಕ ರೀತಿಯಲ್ಲಿ ಗಣತಿ ಮಾಡಲು ನಿರ್ಧರಿಸಿದ ನಂತರದ ಏಕೈಕ ನಾಯಕ ನಿತೀಶ್ ಕುಮಾರ್ ಎಂದು ಹೇಳಿದರು.