ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡದ್ದಕ್ಕೆ ನೀತಿ ಆಯೋಗದ ಸಭೆಗೆ ನಿತೀಶ್ ಕುಮಾರ್ ಗೈರು: ಸಿಪಿಐ
ನಿತೀಶ್ ಕುಮಾರ್ - Photo Credit: PTI
ಪಾಟ್ನಾ: ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರಕಾರ ನಿರಾಕರಿಸಿದ್ದರಿಂದ ಮುಜುಗರಕ್ಕೊಳಗಾದ ಮುಖ್ಯಮಂತ್ರಿ ನಿತೀಶ್ ಕುಮಾರ್, ನೀತಿ ಆಯೋಗದ ಸಭೆಗೆ ಗೈರಾಗಿದ್ದಾರೆ ಎಂದು ಇಂಡಿಯಾ ಮೈತ್ರಿಕೂಟದ ಪಕ್ಷವಾದ ಸಿಪಿಐ(ಎಂಎಲ್)ನ ನಾಯಕ ಮೆಹಬೂಬ್ ಅಲಮ್ ಆರೋಪಿಸಿದರು.
ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡಲಾಗಿದೆ ಎಂದು ದಾರಿ ತಪ್ಪಿಸುತ್ತಿರುವ ಎನ್ಡಿಎ ಸರಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಮುಂದಿನ ತಿಂಗಳು ಪ್ರತಿಭಟನಾ ಪಾದಯಾತ್ರೆಗಳನ್ನು ನಡೆಸಲಾಗುವುದು ಎಂದು ಘೋಷಿಸಿದರು.
ಆದರೆ, ನಿನ್ನೆ (ಜುಲೈ 27) ನಡೆದ ನೀತಿ ಆಯೋಗದ ಸಭೆಗೆ ಗೈರಾದ ನಿತೀಶ್ ಕುಮಾರ್ ನಡೆಯ ಕುರಿತು ಜೆಡಿಯು ನಾಯಕರು ತುಟಿ ಬಿಚ್ಚುತ್ತಿಲ್ಲ.
ನೀತಿ ಆಯೋಗದ ಸಭೆಗೆ ಹಾಜರಾಗುವ ಬದಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜುಲೈ 27ರಂದು ಪಾಟ್ನಾದಲ್ಲಿ ನೆರೆಯ ಜಾರ್ಖಂಡ್ ರಾಜ್ಯದಲ್ಲಿನ ಮುಂಬರುವ ವಿಧಾನಸಭಾ ಚುನಾವಣಾ ಸಿದ್ಧತೆಯ ಕುರಿತು ಪಕ್ಷದ ಸಭೆ ನಡೆಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ(ಎಂಎಲ್) ನಾಯಕ ಮೆಹಬೂಬ್ ಅಲಂ, “ಈ ಮಹತ್ವದ ಸಭೆಗೆ ಅವರು ಹಾಜರಾಗಬೇಕಿತ್ತು. ಬಿಹಾರಕ್ಕೆ ವಿಶೇಷ ಸ್ಥಾನಮಾನ ಪಡೆಯುವ ಹಾಗೂ ರಾಜ್ಯದ ಮೀಸಲಾತಿ ತಿದ್ದುಪಡಿ ಕಾನೂನುಗಳನ್ನು ಸಂವಿಧಾನದ ಒಂಬತ್ತನೆ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ಅವಕಾಶವನ್ನು ಅವರು ಮತ್ತೆ ಕಳೆದುಕೊಂಡರು” ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನದ ಒಂಬತ್ತನೆ ಪರಿಚ್ಛೇದವು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗದ ಕೇಂದ್ರ ಮತ್ತು ರಾಜ್ಯ ಕಾನೂನುಗಳ ಪಟ್ಟಿಯನ್ನು ಒಳಗೊಂಡಿದೆ.
“ನೀತಿ ಆಯೋಗದ ಸಭೆಗೆ ಗೈರಾಗುವ ಮುಖ್ಯಮಂತ್ರಿಗಳ ನಿರ್ಧಾರವು, ಅವರು ಬಿಹಾರದ ಜನತೆಯ ಕಲ್ಯಾಣದ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ ಎಂಬುದನ್ನು ತೋರಿಸುತ್ತಿದೆ” ಎಂದು ಸಿಪಿಐ(ಎಂಎಲ್)ನ ಮತ್ತೊಬ್ಬ ನಾಯಕ ಹಾಗೂ ಶಾಸಕ ಅಜೀತ್ ಕುಮಾರ್ ಸಿಂಗ್ ಆರೋಪಿಸಿದ್ದಾರೆ.