ನಿತೀಶ್ ಕುಮಾರ್ ಗೆ ಇಂಡಿಯಾ ಮೈತ್ರಿಕೂಟದಿಂದ ಪ್ರಧಾನಿ ಹುದ್ದೆಯ ಆಫರ್ ನೀಡಲಾಗಿತ್ತು: ಜೆಡಿಯು ನಾಯಕ ಕೆ.ಸಿ.ತ್ಯಾಗಿ
ನಿತೀಶ್ ಕುಮಾರ್ , ಕೆ.ಸಿ.ತ್ಯಾಗಿ | PC : PTI
ಹೊಸ ದಿಲ್ಲಿ: ತನ್ನ ಮೈತ್ರಿಕೂಟಕ್ಕೆ ಮರಳಿ ಕರೆ ತರಲು ಇಂಡಿಯಾ ಮೈತ್ರಿಕೂಟವು ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಹುದ್ದೆಯ ಆಫರ್ ನೀಡಿತ್ತು. ಆದರೆ, ಅವರು ಅದನ್ನು ನಿರಾಕರಿಸಿದರು ಎಂದು ಆಜ್ ತಕ್/ಇಂಡಿಯಾ ಟುಡೆ ಸುದ್ದಿ ವಾಹಿನಿಗಳಿಗೆ ಶನಿವಾರ ನೀಡಿರುವ ವಿಶೇಷ ಸಂದರ್ಶನದಲ್ಲಿ ಜೆಡಿಯು ನಾಯಕ ಕೆ.ಸಿ.ತ್ಯಾಗಿ ಬಹಿರಂಗ ಪಡಿಸಿದ್ದಾರೆ.
ಆದರೆ, ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಹುದ್ದೆಯ ಆಮಂತ್ರಣ ನೀಡಿದ್ದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
ಈ ಹೇಳಿಕೆಯಿಂದಾಗಿ, ಇಂಡಿಯಾ ಮೈತ್ರಿಕೂಟವು ಜೆಡಿಯು ಹಾಗೂ ತೆಲುಗು ದೇಶಂ ಪಕ್ಷದೊಂದಿಗೆ ಮಾತುಕತೆ ನಡೆಸಿ, ಕೇಂದ್ರದಲ್ಲಿ ಸರಕಾರ ರಚಿಸಲು ಅಗತ್ಯವಾಗಿರುವ ಸಂಖ್ಯಾಬಲವನ್ನು ಪಡೆಯಲು ಕಸರತ್ತು ನಡೆಸುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು 234 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು 293 ಸ್ಥಾನಗಳನ್ನು ಗಳಿಸುವ ಮೂಲಕ ಸರಳ ಬಹುಮತ ಗಳಿಸಿದೆ. ಆದರೆ, ಸ್ವಂತ ಬಹುಮತ ಪಡೆಯಲಾಗದ ಬಿಜೆಪಿಯು ಕೇವಲ 240 ಸ್ಥಾನಗಳಿಗೆ ಸೀಮಿತವಾಗಿದ್ದು, ಬಹುಮತಕ್ಕಾಗಿ ಇನ್ನೂ 32 ಸದಸ್ಯರ ಕೊರತೆಯನ್ನು ಎದುರಿಸುತ್ತಿದೆ.