ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಸ್ಪರ್ಧಿಸಿದರೂ, ನಂತರ ಮೈತ್ರಿ ಬದಲಿಸಲಿದ್ದಾರೆ: ಪ್ರಶಾಂತ್ ಕಿಶೋರ್ ಭವಿಷ್ಯ

ಪ್ರಶಾಂತ್ ಕಿಶೋರ್ | PC : PTI
ಬೆಟ್ಟಯ್ಯ (ಬಿಹಾರ): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಸ್ಪರ್ಧಿಸಿದರೂ, ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಬಯಕೆಯಲ್ಲಿ ಚುನಾವಣೆಯ ನಂತರ ಮೈತ್ರಿಕೂಟ ಬದಲಿಸಲಿದ್ದಾರೆ ಎಂದು ಚುನಾವಣಾ ತಜ್ಞ ಹಾಗೂ ಜನ್ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.
ಹೀಗಿದ್ದೂ, 74 ವರ್ಷದ ನಿತೀಶ್ ಕುಮಾರ್ ಎಷ್ಟು ಕುಖ್ಯಾತರಾಗಿದ್ದಾರೆಂದರೆ, ಅವರು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೂ, ಸತತ ಐದನೆ ಬಾರಿಗೆ ಮುಖ್ಯಮಂತ್ರಿಯಾಗುವುದು ಅಸಾಧ್ಯವಾಗಿದೆ ಎಂದೂ ಅವರು ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ನಿತೀಶ್ ಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ಬಿಜೆಪಿ ಹಿಂಜರಿಯುತ್ತಿರುವುದರಿಂದ, ಅವರು ಚುನಾವಣೆಗೂ ಮುನ್ನ ಎನ್ಡಿಎ ಮೈತ್ರಿಕೂಟ ತೊರೆಯಬಹುದು ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, “ಅವರ ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧಿಸಲಿದ್ದಾರೆ. ನಾನು ಚುನಾವಣಾ ಪ್ರಚಾರವನ್ನು ನಿರ್ವಹಿಸಿದ್ದ 2015ರ ಚುನಾವಣೆಯನ್ನು ಹೊರತುಪಡಿಸಿ, ಅವರು ಪ್ರತಿ ಬಾರಿಯೂ ಅದನ್ನೇ ಮಾಡಿದ್ದಾರೆ. ನಿತೀಶ್ ಕುಮಾರ್ ಅವರ ಜನಪ್ರಿಯತೆ ಕುಸಿಯುತ್ತಿರುವುದರಿಂದ ಅವರನ್ನು ಎನ್ಡಿಎ ಮುಖ್ಯಧಮಂತ್ರಿ ಅಭ್ಯರ್ಥಿಯನ್ನಾಗಿಸಲು ಬಿಜೆಪಿ ಹಿಂಜರಿಯುತ್ತಿದೆ” ಎಂದು ಹೇಳಿದ್ದಾರೆ.
“ಒಂದು ವೇಳೆ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ನಿತೀಶ್ ಕುಮಾರ್ ಅವರನ್ನು ಐದು ವರ್ಷಗಳ ಕಾಲ ಪೂರ್ಣಾವಧಿ ಮುಖ್ಯಮಂತ್ರಿಯನ್ನಾಗಿಸಲಾಗುವುದು ಎಂದು ಘೋಷಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಸವಾಲು ಹಾಕುತ್ತೇನೆ. ಅವರು ಹಾಗೇನಾದರೂ ಮಾಡಿದರೆ, ಬಿಜೆಪಿ ಒಂದು ಸ್ಥಾನ ಗೆಲ್ಲುವುದೂ ಕಷ್ಟವಾಗಲಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ನಿತೀಶ್ ಕುಮಾರ್ ರೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ 2020ರಲ್ಲಿ ಪಕ್ಷದ ಉಚ್ಚಾಟನೆಗೊಂಡಿದ್ದ ಜೆಡಿಯು ಪಕ್ಷದ ಮಾಜಿ ಉಪಾಧ್ಯಕ್ಷರೂ ಆದ ಪ್ರಶಾಂತ್ ಕಿಶೋರ್, “ಮುಂಬರುವ ಚುನಾವಣೆಯಲ್ಲಿ ಜೆಡಿಯು ಕಳಪೆ ಪ್ರದರ್ಶನ ತೋರಲಿದೆ” ಎಂದೂ ಭವಿಷ್ಯ ನುಡಿದಿದ್ದಾರೆ.