ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವವರೆಗೂ ಬಿಎಸ್ಪಿ ಜತೆ ಮೈತ್ರಿ ಇಲ್ಲ: ಸಮಾಜವಾದಿ ಪಕ್ಷ
ಶಿವಪಾಲ್ ಯಾದವ್ (PTI)
ಮುಜಾಫರ್ ನಗರ: ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿಯವರು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವವರೆಗೂ ಆ ಪಕ್ಷದ ಜತೆ ಯಾವುದೇ ಮೈತ್ರಿ ಸಾಧ್ಯತೆ ಇಲ್ಲ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಪ್ರಮುಖ ಸಭೆ ಶೀಘ್ರದಲ್ಲೇ ದಿಲ್ಲಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾದವ್ ಹೇಳಿಕೆ ಮಹತ್ವ ಪಡೆದಿದೆ.
ಪಕ್ಷದ ಕಾರ್ಯಕರ್ತರ ಜತೆ ರವಿವಾರ ಮುಜಾಫರ್ ನಗರ ಮತ್ತು ದೇವಬಂದ್ನಲ್ಲಿ ಸಭೆ ನಡೆಸಿದ ಅವರು, ಹಿಂದಿ ಭಾಷೆ ಮಾತನಾಡುವ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಹೀನಾಯ ಸೋಲು ಅನುಭವಿಸಿದ ಬಗ್ಗೆ ಗಮನ ಸೆಳೆದಾಗ, "ಹೌದು ಮೂರು ರಾಜ್ಯಗಳಲ್ಲೂ ಬಿಜೆಪಿ ಗೆದ್ದಿದೆ. ಅದು ಜನಾಭಿಪ್ರಾಯ. ನಾವದನ್ನು ಒಪ್ಪಿಕೊಳ್ಳಬೇಕು. ಆದಾಗ್ಯೂ ಇಂಡಿಯಾ ಮೈತ್ರಿಕೂಟ 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ನಿಟ್ಟಿನಲ್ಲಿ ಸಂಘಟಿತವಾಗಿ ಹೋರಾಟ ನಡೆಸಲಿದೆ" ಎಂದು ಸ್ಪಷ್ಟಪಡಿಸಿದರು.
ಸ್ಥಾನ ಹಂಚಿಕೆ ಬಗ್ಗೆ ನಿರ್ಧರಿಸಲು ಮತ್ತು ಈ ಬಗ್ಗೆ ಮಾತುಕತೆ ನಡೆಸಲು ಇನ್ನೂ ಸಮಯಾವಕಾಶ ಇದೆ ಎಂದು ಸ್ಪಷ್ಟಪಡಿಸಿದ ಅವರು, ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಕೇಳಿದ ಪ್ರಶ್ನೆಗೆ, "ಈ ಹೊಣೆಗಾರಿಕೆ ನಿಭಾಯಿಸಲು ನಮ್ಮಲ್ಲಿ ಹಲವು ಮಂದಿ ಸಮರ್ಥ ನಾಯಕರಿದ್ದಾರೆ. ಈ ಬಗೆಗಿನ ನಿರ್ಧಾರವನ್ನು ಮುಂದೆ ಕೈಗೊಳ್ಳಲಾಗುವುದು" ಎಂಬ ಉತ್ತರ ನೀಡಿದರು.