‘ಇಂಡಿಯಾ’ ಸಂಚಾಲಕನ ಆಯ್ಕೆ ಕುರಿತು ವಿವಾದವಿಲ್ಲ: ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್ | Photo: PTI
ಪಾಟ್ನಾ: ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ದ ಸಂಚಾಲಕನ ಆಯ್ಕೆಯಲ್ಲಿ ಯಾವುದೇ ವಿವಾದವಿಲ್ಲ, ಹೀಗಾಗಿ ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಮಂಗಳವಾರ ಹೇಳಿದ್ದಾರೆ.
ತನ್ನ ಸ್ವಗ್ರಾಮ ಗೋಪಾಲಗಂಜ್ ಜಿಲ್ಲೆಯ ಫುಲ್ವಾರಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಲಾಲು, ಸಂಚಾಲಕ ಹುದ್ದೆಗೆ ಯಾವುದೇ ಹೆಸರನ್ನು ಈವರೆಗೆ ನಿರ್ಧರಿಸಿಲ್ಲ, ಆ ಹುದ್ದೆಗೆ ಯಾರು ಬೇಕಾದರೂ ನೇಮಕಗೊಳ್ಳಬಹುದು ಎಂದು ತಿಳಿಸಿದರು.
೨೦೨೪ರ ಲೋಕಸಭಾ ಚುನಾವಣೆಗಳಿಗೆ ಮುನ್ನ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ್ ಅವರಿಗೇ ‘ಇಂಡಿಯಾ’ ಸಂಚಾಲಕನ ಹುದ್ದೆ ದೊರೆಯಲಿದೆ ಎಂಬ ವ್ಯಾಪಕ ಊಹಾಪೋಹಗಳಿವೆ.
ಬಿಹಾರದಲ್ಲಿ ಮಹಾ ಮೈತ್ರಿಕೂಟ ಸರಕಾರ ರಚನೆಗೆ ಮುನ್ನ ಮುಖ್ಯಮಂತ್ರಿ ನಿತೀಶ್ ಜೊತೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿರಲಿಲ್ಲ ಎಂದೂ ಲಾಲು ಬಲವಾಗಿ ಪ್ರತಿಪಾದಿಸಿದರು.
ಉಭಯ ಪಕ್ಷಗಳ ನಡುವಿನ ಒಪ್ಪಂದದಂತೆ ನಿತೀಶ ತನ್ನ ಮುಖ್ಯಮಂತ್ರಿ ಹುದ್ದೆಯನ್ನು ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಅವರಿಗೆ ಹಸ್ತಾಂತರಿಸಲಿದ್ದಾರೆ ಮತ್ತು ಸ್ವತಃ ರಾಷ್ಟ್ರ ರಾಜಕಾರಣಕ್ಕೆ ತೆರಳಲಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಲೇ ಇದ್ದಾರೆ.
ತೇಜಸ್ವಿಯನ್ನು ಮುಖ್ಯಮಂತ್ರಿಯನ್ನಾಗಿ ನೋಡುವುದು ತನ್ನ ಮತ್ತು ರಾಜ್ಯದ ಜನತೆಯ ಬಯಕೆಯಾಗಿದೆ ಎಂದು ಲಾಲು ಹೇಳಿದರಾದರೂ,ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದು ಮಹಾ ಮೈತ್ರಿಕೂಟದ ಮೊದಲ ಆದ್ಯತೆಯಾಗಿದೆ ಎಂದರು.
‘ಬಿಜೆಪಿ ಭಗಾವೋ,ದೇಶ ಬಚಾವೋ ’ಎಂಬ ಹೊಸ ಘೋಷಣೆಯನ್ನು ಮೊಳಗಿಸಿದ ಲಾಲು,‘ಇದು ಮೊದಲು ನಮ್ಮ ಘೋಷಣೆಯಾಗಿತ್ತು,ಆದರೆ ಈಗ ಸಂಕಲ್ಪವಾಗಿ ಮಾರ್ಪಟ್ಟಿದೆ ’ ಎಂದು ಹೇಳಿದರು.
೧೮ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಮೂರನೇ ಸುತ್ತಿನ ಸಭೆಯು ಆ.೩೦ ಮತ್ತು ಸೆ.೧ರಂದು ಮುಂಬೈನಲ್ಲಿ ನಡೆಯಲಿದೆ.