ಚುನಾವಣಾ ಆಯೋಗದ ಮೇಲೆ ಅತಿಯಾದ ನಿಯಂತ್ರಣ ಸಾಧ್ಯವಿಲ್ಲ: ದಿಲ್ಲಿ ಹೈಕೋರ್ಟ್
ದ್ವೇಷ ಭಾಷಣ ಮಾಡಿದ ಪ್ರಧಾನಿ ಮೋದಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ

ಚುನಾವಣಾ ಆಯೋಗ, ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ: ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಅದರ ಕಾರ್ಯನಿರ್ವಹಣೆಯನ್ನು ತಾನು ಅತಿಯಾಗಿ ನಿಯಂತ್ರಿಸುವಂತಿಲ್ಲ ಎಂದು ದಿಲ್ಲಿ ಉಚ್ಚನ್ಯಾಯಾಲಯವು ಹೇಳಿದೆ.
ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ದ್ವೇಷ ಭಾಷಣವನ್ನು ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ನ್ಯಾ.ಸಚಿನ್ ದತ್ತಾ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎನ್ನುವುದನ್ನು ಯಾರು ನಿರ್ಧರಿಸಬೇಕು ಎಂದು ಪ್ರಶ್ನಿಸಿದ ನ್ಯಾ.ದತ್ತಾ,‘ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ,ನಾವು ಅದನ್ನು ಅತಿಯಾಗಿ ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
ಚುನಾವಣಾ ಆಯೋಗದ ಕ್ರಮಗಳು ದ್ವೇಷ ಭಾಷಣದಲ್ಲಿ ತೊಡಗಿರುವ ವ್ಯಕ್ತಿಯನ್ನು ಅವಲಂಬಿಸಿ ಬದಲಾಗುವಂತಿಲ್ಲ. ಆಯೋಗದ ಕ್ರಮಗಳು ಎಲ್ಲರಿಗೂ ಏಕರೂಪವಾಗಿರಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗದ ಪರ ನ್ಯಾಯವಾದಿ ಸುರುಚಿ ಸೂರಿ ಅವರು,ಪ್ರಧಾನಿಯವರ ಹೇಳಿಕೆಗಳ ವಿರುದ್ಧ ದೂರುಗಳನ್ನು ಸ್ವೀಕರಿಸಿದ ಬಳಿಕ ಆಯೋಗವು ಬಿಜೆಪಿಗೆ ನೋಟಿಸ್ ಹೊರಡಿಸಿದ್ದು,ಮೇ ೧೫ರೊಳಗೆ ಅದರಿಂದ ಉತ್ತರವನ್ನು ನಿರೀಕ್ಷಿಸಲಾಗಿದೆ ಮತ್ತು ನಂತರ ಕಾನೂನಿಗನುಗುಣವಾಗಿ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ ೧೩ಕ್ಕೆ ನಿಗದಿಗೊಳಿಸಿದೆ.
ಮೋದಿ ರಾಜಸ್ಥಾನದ ಬನ್ಸವಾಡಾ ಮತ್ತು ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ತನ್ನ ಚುನಾವಣಾ ಪ್ರಚಾರ ಸಭೆಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಮಾಡಿದ ದ್ವೇಷ ಭಾಷಣಗಳನ್ನು ಅರ್ಜಿಯು ಉಲ್ಲೇಖಿಸಿದೆ.
ಮೋದಿಯವರ ದ್ವೇಷಭಾಷಣಗಳ ವಿರುದ್ಧ ಹಲವಾರು ನಾಗರಿಕರು ದೂರುಗಳನ್ನು ಸಲ್ಲಿಸಿದ್ದರೂ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಚುನಾವಣಾ ಆಯೋಗವು ವಿಫಲಗೊಂಡಿದೆ. ಮೋದಿಯವರ ಹೇಳಿಕೆಗಳನ್ನು ಇತರ ಬಿಜೆಪಿ ನಾಯಕರು ನಿಯಮಿತವಾಗಿ ಪುನರಾವರ್ತಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪಕ್ಷದ ಅದ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಸಚಿವ ಅನುರಾಗ ಠಾಕೂರ್ ಸೇರಿದಂತೆ ಕೋಮು ಭಾಷಣಗಳನ್ನು ಮಾಡಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಅರ್ಜಿಯು ಆಗ್ರಹಿಸಿದೆ.