ಅನ್ಯಾಯಕ್ಕೊಳಗಾದವರಿಗೆ ನೆರವಾಗಲು ಸಾಧ್ಯವಾಗುತ್ತದೆ ಎನ್ನುವುದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ : ಸಿಜೆಐ ಡಿ ವೈ ಚಂದ್ರಚೂಡ್ ವಿದಾಯ ಭಾಷಣ
Photo: PTI
ಹೊಸದಿಲ್ಲಿ : ಅನ್ಯಾಯಕ್ಕೊಳಗಾದವರಿಗೆ ನೆರವಾಗಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎನ್ನುವುದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ ಎಂದು ನಿರ್ಗಮಿತ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಶುಕ್ರವಾರ ಸುಪ್ರೀಂ ಕೋರ್ಟ್ನ ಕೋರ್ಟ್ ನಲ್ಲಿ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.
ನವೆಂಬರ್ 10 ರಂದು ನಿವೃತ್ತರಾಗಲಿರುವ ಹಿನ್ನೆಲೆ ಶುಕ್ರವಾರ ಸಿಜೆಐ ಚಂದ್ರಚೂಡ್ ಅವರ ಕೊನೆಯ ಕೆಲಸದ ದಿನವಾಗಿದೆ. ಈ ನ್ಯಾಯಾಲಯದಲ್ಲಿ ಕುಳಿತಿರುವುದು ದೊಡ್ಡ ಗೌರವವಾಗಿದೆ. ನಾನು ಚಿಕ್ಕವನಿದ್ದಾಗ ಈ ಕೋರ್ಟಿನ ಕೊನೆಯ ಸಾಲಿನಲ್ಲಿ ಬಂದು ಕುಳಿತು, ಬಾರ್ನ ಶ್ರೇಷ್ಠರು ವಾದಿಸುವುದನ್ನು ನೋಡಿ, ವಾದ ಮಾಡುವುದು ಹೇಗೆ, ನ್ಯಾಯಾಲಯದಲ್ಲಿ ಹೇಗೆ ವರ್ತಿಸಬೇಕು, ನ್ಯಾಯಾಲಯದ ಕುಶಲತೆ, ಅರ್ಜಿ ಸಲ್ಲಿಸುವುದು ಹೇಗೆ ಎಂದು ಕಲಿಯುತ್ತಿದ್ದೆ ಎಂದು ಸಿಜೆಐ ವಿದಾಯ ಭಾಷಣದಲ್ಲಿ ನೆನಪಿಸಿಕೊಂಡಿದ್ದಾರೆ.
ಸಿಜೆಐ ಡಿವೈ ಚಂದ್ರಚೂಡ್ ಎಲ್ಲರಿಗೂ ಧನ್ಯವಾದ ಹೇಳುತ್ತಾ, ನಿಮ್ಮಲ್ಲಿ ಪ್ರತಿಯೊಬ್ಬರೂ ನನಗೆ ಕಾನೂನಿನ ಬಗ್ಗೆ ಕಲಿಸಿದ್ದೀರಿ. ನ್ಯಾಯಾಲಯದಲ್ಲಿ ನೀವೆಲ್ಲರೂ ನನಗೆ ಹೇಳಿದ ಎಲ್ಲದರಲ್ಲೂ ನಾನು ಜೀವನದ ಬಗ್ಗೆ ತುಂಬಾ ಕಲಿತಿದ್ದೇನೆ. ನೀವು ಪ್ರತಿಯೊಂದು ಪ್ರಕರಣದಲ್ಲಿ, ಸಮಾಜದಲ್ಲಿ ಏನು ನಡೆಯುತ್ತಿದೆ, ರಾಷ್ಟ್ರದಾದ್ಯಂತ ಏನು ನಡೆಯುತ್ತಿದೆ ಮತ್ತು ನೀವು ಮಾಡುವ ಕೆಲಸದಲ್ಲಿ ಸಾಮಾನ್ಯ ನಾಗರಿಕರ ನಂಬಿಕೆಯನ್ನು ಉಳಿಸಿಕೊಳ್ಳಲು ಈ ನ್ಯಾಯಾಲಯದ ಸ್ಥಾನದ ಪ್ರಾಮುಖ್ಯತೆಯ ಬಗ್ಗೆ ನೀವು ತುಂಬಾ ಕಲಿಯುತ್ತೀರಿ ಎಂದು ಹೇಳಿದ್ದಾರೆ.
ಕಿಕ್ಕಿರಿದ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡಿದ ಸಿಜೆಐ, ನಾವು ಈ ನ್ಯಾಯಾಲಯದಲ್ಲಿ ಜನರಿಗೆ ಅಂತಿಮ ನ್ಯಾಯ ನೀಡುವ ಕಾರಣದಿಂದ ಒಂದುಗೂಡಿದ್ದೇವೆ. ನಾವು ಯಾತ್ರಾರ್ಥಿಗಳಾಗಿ, ನಾವು ಸ್ವಲ್ಪ ಸಮಯದವರೆಗೆ ಬರುತ್ತೇವೆ ಮತ್ತು ನಂತರ ನಾವು ತೆರಳುತ್ತೇವೆ. ಆದರೆ ನಾವು ಮಾಡುವ ಕೆಲಸವು ಸಂಸ್ಥೆಗೆ ಕೀರ್ತಿ ತರಬಹುದು ಅಥವಾ ನಾಶಪಡಿಸಬಹುದು. ಖಂಡಿತ, ನಾನಿಲ್ಲದೆ ನ್ಯಾಯಾಲಯವು ಉಳಿಯುವುದಿಲ್ಲ ಎಂದು ನೀವು ಭಾವಿಸುವಷ್ಟು ನಮಗೆ ಯಾರೂ ಮುಖ್ಯವಲ್ಲ ಎಂದು ಅವರು ಹೇಳಿದ್ದಾರೆ.
ಹಿಂದೆ ದೊಡ್ಡ ದೊಡ್ಡ ನ್ಯಾಯಾಧೀಶರು ಈ ಪೀಠವನ್ನು ಅಲಂಕರಿಸಿದ್ದಾರೆ. ನನ್ನ ನಿರ್ಗಮನವು ನ್ಯಾಯಾಲಯಕ್ಕೆ ಸ್ವಲ್ಪವೂ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನನ್ನ ನಂತರ ಈ ನ್ಯಾಯಾಲಯವನ್ನು ಮುನ್ನಡೆಸಲಿರುವ ವ್ಯಕ್ತಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸ್ಥಿರ, ಘನ ಮತ್ತು ನ್ಯಾಯದ ಕಾರಣಕ್ಕೆ ಬದ್ಧರಾಗಿರುವ ವ್ಯಕ್ತಿ ಎಂದು ನನಗೆ ತಿಳಿದಿದೆ. ಸೋಮವಾರ ಇಲ್ಲಿಗೆ ಬಂದು ಕೂರಲು ಹೊರಟಿರುವ ವ್ಯಕ್ತಿ ತುಂಬಾ ಘನತೆ ಹೊಂದಿರುವ, ನ್ಯಾಯಾಲಯದ ಸ್ಥಾನ ಮತ್ತು ವಿಶಾಲ ಸಾಮಾಜಿಕ ಮತ್ತು ರಾಜಕೀಯ ಜೀವನದ ಬಗ್ಗೆ ತಿಳಿದಿರುವ ವ್ಯಕ್ತಿ ಎಂಬ ಸಂತೋಷದ ಭಾವನೆಯೊಂದಿಗೆ ನಾನು ನ್ಯಾಯಾಲಯದಿಂದ ನಿರ್ಗಮಿಸುತ್ತಿದ್ದೇನೆ. ನಾನು ಯಾರಿಗಾದರೂ ನೋವುಂಟುಮಾಡಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಬೇಕೆಂದು ನಾನು ಬಯಸುತ್ತೇನೆ ಎಂದು ಅವರು ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ. ಈ ವೇಳೆ ನಿಯೋಜಿತ ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಉಪಸ್ಥಿತರಿದ್ದರು.
ನ್ಯಾಯಮೂರ್ತಿ ಚಂದ್ರಚೂಡ್ ಅವರು 2022ರ ನವೆಂಬರ್ 9ರಂದು ಸಿಜೆಐ ಆಗಿ ಅಧಿಕಾರ ವಸಹಿಸಿಕೊಂಡಿದ್ದರು. ಅವರ ತಂದೆ ವೈ ವಿ ಚಂದ್ರಚೂಡ್ 1978 ರಿಂದ 1985 ರವರೆಗೆ ಸುದೀರ್ಘ ಅವಧಿವರೆಗೆ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು. ನ್ಯಾಯಮೂರ್ತಿ ಚಂದ್ರಚೂಡ್ ಜೂನ್ 1998ರಲ್ಲಿ ಬಾಂಬೆ ಹೈಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡಿದ್ದರು. ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.