‘ಗಂಗಾ ಜಲ’, ಪೂಜಾ ಸಾಮಗ್ರಿಗಳ ಮೇಲೆ ಜಿಎಸ್ಟಿ ವಿನಾಯಿತಿ ಮುಂದುವರಿಯಲಿದೆ: ವಿತ್ತ ಸಚಿವಾಲಯ
PHOTO : PTI
ಹೊಸದಿಲ್ಲಿ: ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ವಿತ್ತ ಸಚಿವಾಲಯದ ಕಂದಾಯ ಇಲಾಖೆ ಇಂದು ಸ್ಪಷೀಕರಣವನ್ನು ನೀಡಿ ಗಂಗಾ ಜಲ ಮತ್ತು ಇತರ ಪೂಜಾ ಸಾಮಗ್ರಿಗಳಿಗೆ ಜಿಎಸ್ಟಿ ವಿನಾಯಿತಿ ಮುಂದುವರಿಯಲಿದೆ ಎಂದು ತಿಳಿಸಿದೆ. ಗಂಗಾಜಲ ಮೇಲಿನ ಜಿಎಸ್ಟಿ ಅನ್ವಯ ಕುರಿತ ಕೆಲ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಲಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮತ್ತು ಕಸ್ಟಮ್ಸ್ ಮಂಡಳಿ ಹೇಳಿದೆ.
“ದೇಶಾದ್ಯಂತ ಮನೆಗಳಲ್ಲಿ ಪೂಜೆಗೆ ಬಳಸುವ ಗಂಗಾ ಜಲ ಮತ್ತು ಇತರ ಪೂಜಾ ಸಾಮಗ್ರಿಗಳಿಗೆ ಜಿಎಸ್ಟಿ ವಿನಾಯಿತಿಯಿದೆ, 2017ರಲ್ಲಿ ನಡೆದ ಜಿಎಸ್ಟಿ ಮಂಡಳಿಯ 14ನೇ ಮತ್ತು 15ನೇ ಸಭೆಗಳಲ್ಲಿ ಈ ವಿಚಾರ ಚರ್ಚಿಸಲಾಗಿತ್ತು ಅವುಗಳನ್ನು ವಿನಾಯಿತಿ ಪಟ್ಟಿಯಲ್ಲಿ ಇರಿಸಲು ನಿರ್ಧರಿಸಲಾಗಿತ್ತು. ಜಿಎಸ್ಟಿ ಜಾರಿಗೊಳಿಸಿದಂದಿನಿಂದ ಈ ಉತ್ಪನ್ನಗಳಿಗೆ ವಿನಾಯಿತಿಯಿದೆ,” ಎಂದು ಮಂಡಳಿ ಹೇಳಿದೆ.
ಜಿಎಸ್ಟಿ ಮಂಡಳಿಯು ಕಾಜಲ್, ಕುಂಕುಮ, ಸಿಂಧೂರ, ಪ್ಲಾಸ್ಟಿಕ್ ಮತ್ತು ಗಾಜಿನ ಬಳೆಗಳು, ಮತ್ತು ಎಲ್ಲಾ ವಿಧದ ಪೂಜಾ ಸಾಮಗ್ರಿಗಳಿಗೆ ಜಿಎಸ್ಟಿ ವಿನಾಯಿತಿ ಒದಗಿಸಿತ್ತು.
ಸರ್ಕಾರದ ಜಿಎಸ್ಟಿ ಸಂಗ್ರಹವು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ 10.2ರಷ್ಟು ಏರಿಕೆಯಾಗಿ ರೂ 1.63 ಲಕ್ಷ ಕೋಟಿ ತಲುಪಿದೆ. ಆಗಸ್ಟ್ ತಿಂಗಳಿನ ಸಂಗ್ರಹಕ್ಕಿಂತ ಇದು ಶೇ 2.3 ರಷ್ಟು ಹೆಚ್ಚಾಗಿದೆ.