ಜಮ್ಮು-ಕಾಶ್ಮೀರದಲ್ಲಿ ಹಿಂದೆಯೂ ಅಧಿಕ ಮತದಾನವಾಗಿತ್ತು: 370ನೇ ವಿಧಿ ರದ್ದತಿ ನಂಟು ಕಲ್ಪಿಸಿದ ಪ್ರಧಾನಿ ಹೇಳಿಕೆ ಹಿಂದಿನ ವಾಸ್ತವ ಬಯಲಿಗೆಳೆದ ಚುನಾವಣಾ ಆಯೋಗದ ದತ್ತಾಂಶ
ಚುನಾವಣಾ ಆಯೋಗ , ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಚುನಾವಣಾ ಆಯೋಗದ ದತ್ತಾಂಶಗಳಂತೆ ಜಮ್ಮು-ಕಾಶ್ಮೀರವು ಹಿಂದೆಲ್ಲ ಚುನಾವಣೆಗಳಲ್ಲಿ ಹೆಚ್ಚಿನ ಮತದಾನವನ್ನು ದಾಖಲಿಸಿತ್ತು. ಈ ದತ್ತಾಂಶಗಳು ‘ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಮತದಾನ ನಡೆದಿದೆ, ಇದು 370ನೇ ವಿಧಿಯನ್ನು ರದ್ದುಗೊಳಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರವನ್ನು ಮತದಾರರು ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ’ ಎಂಬ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಗಳ ಪೊಳ್ಳುತನವನ್ನು ಬಯಲಿಗೆಳೆದಿವೆ ಎಂದು thewire.in ವರದಿ ಮಾಡಿದೆ.
ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ ಮೇ 13ರಂದು ಕಾಶ್ಮೀರ ಕಣಿವೆಯಲ್ಲಿ ಮತದಾನ ನಡೆದಿದ್ದು,ಇದು 2019, ಆ.5ರಂದು 370ನೇ ವಿಧಿಯ ರದ್ದತಿಯ ನಂತರದ ಪ್ರಮುಖ ಚುನಾವಣೆಯಾಗಿದೆ. ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಶೇ.38ನ್ನೂ ತಲುಪಿರಲಿಲ್ಲ, ಆದಾಗ್ಯೂ ಇದನ್ನೇ ಸಾಧನೆಯೆಂಬಂತೆ ಬಿಂಬಿಸಿದ್ದ ಮೋದಿ-ಶಾ ಜೋಡಿ, ಇದು 370ನೇ ವಿಧಿಯನ್ನು ರದ್ದುಗೊಳಿಸಿದ್ದ ಕೇಂದ್ರ ನಿರ್ಧಾರವನ್ನು ಎತ್ತಿ ಹಿಡಿದಿದೆ ಎಂದು ಹೇಳಿಕೊಂಡಿದ್ದಾರೆ.
ಚುನಾವಣಾ ಆಯೋಗದ ದತ್ತಾಂಶಗಳಂತೆ ಶ್ರೀನಗರ ಲೋಕಸಭಾ ಕ್ಷೇತ್ರವು 1984ರ ಚುನಾವಣೆಗಳಲ್ಲಿ ಅತ್ಯಂತ ಹೆಚ್ಚಿನ, ಶೇ.73.51ರಷ್ಟು ಮತದಾನವನ್ನು ದಾಖಲಿಸಿತ್ತು.
ಆಡಳಿತಾರೂಢ ಬಿಜೆಪಿಯು ಹಾಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಹೆಚ್ಚಿನ ಮತದಾನಕ್ಕೆ ರಾಜಕೀಯ ಬಣ್ಣ ನೀಡಲು ಪ್ರಯತ್ನಿಸಬಹುದು. 370ನೇ ವಿಧಿ ಏನೇ ಆಗಿರಲಿ, ಆದರೆ ಹಿಂದಿನ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯು ಕಾಶ್ಮೀರದ ಜನರು ಯಾವಾಗಲೂ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಶ್ರೀನಗರದ ರಾಜಕೀಯ ವಿಶ್ಲೇಷಕರೋರ್ವರು ಅಭಿಪ್ರಾಯಿಸಿದರು.
1984ರ ಲೋಕಸಭಾ ಚುನಾವಣೆಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಒಟ್ಟು ಶೇ.66.41ರಷ್ಟು ಮತದಾನವಾಗಿತ್ತು. ಬಳಿಕ 1987ರ ವಿಧಾನಸಭಾ ಚುನಾವಣೆಯಲ್ಲಿ ಕಣಿವೆಯಲ್ಲಿ ಅಕ್ರಮಗಳು ನಡೆದಿದ್ದು ಇದು ಮತದಾರರಲ್ಲಿ ಅಪನಂಬಿಕೆಯ ಬೀಜಗಳನ್ನು ಬಿತ್ತಿತ್ತು ಮತ್ತು ಮೂರು ದಶಕಗಳಿಗೂ ಅಧಿಕ ಸಮಯ ಈ ಪ್ರದೇಶವನ್ನು ತಲ್ಲಣಗೊಳಿಸಿದ್ದ ಸಶಸ್ತ್ರ ಬಂಡಾಯಕ್ಕೆ ದಾರಿ ಮಾಡಿಕೊಟ್ಟಿತ್ತು.
ಮೇ 20ರಂದು ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿದ್ದು,ಶೇ.59ರಷ್ಟು ಮತದಾನ ದಾಖಲಾಗಿದೆ. 1984ರ ಲೋಕಸಭಾ ಚುನಾವಣೆಗಳಲ್ಲಿ ಕಾಶ್ಮೀರ ಕಣಿವೆಯು ಶೇ.61.09ರಷ್ಟು ಕನಿಷ್ಠ ಮತದಾನವನ್ನು ದಾಖಲಿಸಿತ್ತು.
ಮೇ 25ರಂದು ಅನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು,ದತ್ತಾಂಶಗಳಂತೆ 1984ರ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಶೇ.70.08ರಷ್ಟು ಭಾರೀ ಪ್ರಮಾಣದಲ್ಲಿ ಮತದಾನ ನಡೆದಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಜಮ್ಮು ಪ್ರದೇಶದ ಉಧಮಪುರ ಕ್ಷೇತ್ರದಲ್ಲಿ ಕೇವಲ ಶೇ.55.1ರಷ್ಟು ಮತದಾನ ನಡೆದಿತ್ತು. ಜಮ್ಮು ಕ್ಷೇತ್ರದಲ್ಲಿ ಶೇ.71 ಮತ್ತು ಲಡಾಖ್ನಲ್ಲಿ ಶೇ.68.29ರಷ್ಟು ಮತದಾನ ನಡೆದಿತ್ತು.
ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಬಳಿಕ ಜಾರ್ಖಂಡ್ನಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಮೋದಿ,ಶ್ರೀನಗರದಲ್ಲಿ ಶೇ.38ಕ್ಕಿಂತ ಕೊಂಚ ಕಡಿಮೆ ಮತದಾನವಾಗಿರುವುದು ಚುನಾವಣೆಗಳಲ್ಲಿ ಜನರ ವಿಶ್ವಾಸ ಮತ್ತು ಅವರು ಭಾರತೀಯ ಸಂವಿಧಾನವನ್ನು ಒಪ್ಪಿಕೊಂಡಿರುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಶಾ ಕೂಡ 370ನೇ ವಿಧಿಯನ್ನು ರದ್ದುಗೊಳಿಸಿದ್ದ ನಿರ್ಧಾರ ಸರಿಯಾಗಿತ್ತು ಎನ್ನುವುದಕ್ಕೆ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಪ್ರಮಾಣ 2019ರ ಶೇ.14ರಿಂದ ಶೇ.37ಕ್ಕೆ ಏರಿಕೆಯಾಗಿರುವುದಕ್ಕಿಂತ ಹೆಚ್ಚಿನ ಪುರಾವೆ ಬೇಕಿಲ್ಲ ಎಂದು ಹೇಳಿದ್ದರು.
ಆದಾಗ್ಯೂ 2019ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಹಿಂಬಡ್ತಿ ಪಡೆದ ಜಮ್ಮು-ಕಾಶ್ಮೀರದಲ್ಲಿ ಮತದಾನದ ಪ್ರಮಾಣ ಹಿಂದೆಯೂ ಹೆಚ್ಚಿನ ಪ್ರಮಾಣದಲ್ಲಿತ್ತು,ಇದು ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಗೂ 370ನೇ ವಿಧಿಯ ರದ್ದತಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಸೂಚಿಸುತ್ತಿದೆ.
ಜಮ್ಮು-ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆಗಳಲ್ಲಿ 1980ರಲ್ಲಿ ಶೇ.48.05,1989ರಲ್ಲಿ ಶೇ.26.68,1996ರಲ್ಲಿ ಶೇ.48.96,1998ರಲ್ಲಿ ಶೇ.44.21,1999ರಲ್ಲಿ ಶೇ.32.34,2004ರಲ್ಲಿ ಶೇ.35.20,2009ರಲ್ಲಿ ಶೇ.39.7 ಮತ್ತು 2014ರಲ್ಲಿ ಶೇ.49.72ರಷ್ಟು ಮತದಾನವಾಗಿತ್ತು. ಬಂಡಾಯದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರಿಂದ 1991ರಲ್ಲಿ ಲೋಕಸಭಾ ಚುನಾವಣೆಯನ್ನು ನಡೆಸಲು ಸಾಧ್ಯವಾಗಿರಲಿಲ್ಲ.