ತೆಲಂಗಾಣ ಸರಕಾರದಲ್ಲಿ ಮುಸ್ಲಿಂ ಪ್ರಾತಿನಿಧ್ಯ ಶೂನ್ಯ: ಅಲ್ಲಿನ ಕಾಂಗ್ರೆಸ್ ನಲ್ಲಿಲ್ಲ ಒಬ್ಬೇ ಒಬ್ಬ ಮುಸ್ಲಿಂ ಶಾಸಕ
Photo credit: PTI
ಹೈದರಾಬಾದ್: ಮುಸ್ಲಿಮರ ಸಾಕಷ್ಟು ಬೆಂಬಲದೊಂದಿಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ್ದರೂ, ನೂತನ ಸಚಿವ ಸಂಪುಟದಲ್ಲಿ ಮುಸ್ಲಿಮರಿಗೆ ಯಾವುದೇ ಪ್ರಾತಿನಿಧ್ಯ ನೀಡದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ತೆಲಂಗಾಣ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಮುಸ್ಲಿಮರಿಗೆ ಎಂಎಲ್ಸಿ ಮಾಡಿ ಸಚಿವ ಸ್ಥಾನ ಕೊಡುವ ಅವಕಾಶವಿದ್ದರೂ ಕಾಂಗ್ರೆಸ್ ಅದನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.
ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಕರ್ನಾಟಕ ಕಾಂಗ್ರೆಸ್ ಸರಕಾರ ಭಟ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತೆಲಂಗಾಣ ಸಚಿವ ಸಂಪುಟದಲ್ಲಿ ಮುಸ್ಲಿಂ ಪ್ರಾತಿನಿಧ್ಯ ಇಲ್ಲದಿರುವ ಕುರಿತ ಚರ್ಚೆ ಮುನ್ನಲೆಗೆ ಬಂದಿದೆ.
ತೆಲಂಗಾಣ ಮುಸ್ಲಿಂ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ನವೆಂಬರ್ 30 ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನ ಬೆಂಬಲವನ್ನು ಘೋಷಿಸಿತ್ತು. ತೆಲಂಗಾಣದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮತಗಳ ಬೆಂಬಲದೊಂದಿಗೆ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೂ, ಸಚಿವ ಸಂಪುಟದಲ್ಲಿ ಮುಸ್ಲಿಮರಿಗೆ ಸ್ಥಾನ ಯಾಕೆ ನೀಡಿಲ್ಲ ಎಂಬ ಪ್ರಶ್ನೆಗಳು ಕೇಳಿ ಬಂದಿದೆ.
ಒಟ್ಟು 119 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ಮುಸ್ಲಿಂ ಜನಸಂಖ್ಯೆಯು ಇತ್ತೀಚೆಗೆ ಚುನಾವಣೆ ಎದುರಿಸಿದ ಪಂಚ ರಾಜ್ಯಗಳಲ್ಲಿಯೇ ಗರಿಷ್ಠವಾಗಿದೆ. 2011 ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಶೇ 12.6ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ, ಅವರೆಲ್ಲರೂ ಸೋಲನುಭವಿಸಿದ್ದರು. ಆದರೆ, ಕಾಂಗ್ರೆಸ್ಗೆ ಮುಸ್ಲಿಮರ ಬೆಂಬಲ ಮತ್ತು ಗಮನಾರ್ಹ ಮತ ಹಂಚಿಕೆ ನಡೆದಿತ್ತಾದರೂ ಅಧಿಕಾರದಲ್ಲಿರುವ ಕಾಂಗ್ರೆಸ್ ಯಾವುದೇ ಮುಸ್ಲಿಂ ಸದಸ್ಯರನ್ನು ಸಚಿವ ಸ್ಥಾನಗಳಿಗೆ ನೇಮಿಸದೇ ಇರುವುದು ಈಗ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ಬಾರಿ, ಮಾಜಿ ಮುಖ್ಯಮಂತ್ರಿ ಕೆಸಿಆರ್ ನೇತೃತ್ವದ ಹಿಂದಿನ ಬಿಆರ್ಎಸ್ ಸರ್ಕಾರವು ಚುನಾಯಿತ ಶಾಸಕರಾಗದಿದ್ದರೂ ಎಂಎಲ್ಸಿ ಮಾಡಿ ಮುಹಮ್ಮದ್ ಮಹಮೂದ್ ಅಲಿ ಅವರಿಗೆ ಮಹತ್ವದ ಗೃಹ ಖಾತೆಯನ್ನು ನೀಡಿತ್ತು. 2014-18ರ ರಾಜ್ಯದ ಮೊದಲ ಸಚಿವ ಸಂಪುಟದಲ್ಲಿ ಮಹಮೂದ್ ಅಲಿ ಅವರು ಉಪಮುಖ್ಯಮಂತ್ರಿ ಮತ್ತು ಕಂದಾಯ, ಮುದ್ರಾಂಕ ಮತ್ತು ನೋಂದಣಿ, ಪರಿಹಾರ ಮತ್ತು ಪುನರ್ವಸತಿ, ನಗರ ಭೂ ಸೀಲಿಂಗ್ ಸಚಿವ ಸ್ಥಾನವನ್ನು ಪಡೆದಿದ್ದರು.
ಆದರೆ ಈಗ ಅಧಿಕ್ಕಾರಕ್ಕೆ ಏರಿದ ಕಾಂಗ್ರೆಸ್ ಸರಕಾರ ಮುಸ್ಲಿಮರನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಈಗಿನ ಸರಕಾರದ ಕಾರ್ಯವೈಖರಿ ಗಮನಿಸಿ ಲೋಕಸಭೆಗೆಯಲ್ಲಿ ಯಾರಿಗೆ ಮತ ಚಲಾಯಿಸಬೇಕು ಎಂದು ಮುಸ್ಲಿಮರು ನಿರ್ಧರಿಸಲಿದ್ದಾರೆ ಎಂದು ಅಲ್ಲಿನ ಮುಸ್ಲಿಂ ಸಂಘಟನೆಗಳ ಮುಖಂಡರು ಹೇಳಿದ್ದಾರೆ.