"ನಮ್ಮನ್ನು ಯಾರೂ ನಂಬುತ್ತಿರಲಿಲ್ಲ, ದೇವರೇ ವಿಡಿಯೊ ವೈರಲ್ ಆಗುವಂತೆ ಮಾಡಿರಬೇಕು"
ಮಣಿಪುರ ವಿಡಿಯೊದಲ್ಲಿರುವ ಸಂತ್ರಸ್ತೆಯ ಪತಿ, ಹಿರಿಯ ಕಾರ್ಗಿಲ್ ಯೋಧನ ಅಳಲು
Photo; PTI
ಇಂಫಾಲ: "ಸತ್ಯ ಹೊರಬರುವುದನ್ನು ಖಾತ್ರಿಗೊಳಿಸಲು ದೇವರೇ ಲೈಂಗಿಕ ದೌರ್ಜನ್ಯದ ವಿಡಿಯೊವನ್ನು ಚಿತ್ರೀಕರಿಸಿ, ಅದು ವೈರಲ್ ಆಗುವಂತೆ ಮಾಡಿರಬಹುದು" ಎಂದು ಮೇ 4ರಂದು ಮಣಿಪುರ ಹಿಂಸಾಚಾರದಲ್ಲಿ ಗುಂಪೊಂದು ಮಹಿಳೆಯರಿಬ್ಬರ ನಗ್ನ ಮೆರವಣಿಗೆ ನಡೆಸಿದ ಘಟನೆಯ ಕುರಿತು ಸಂತ್ರಸ್ತ ಮಹಿಳೆಯೋರ್ವರ ಪತಿಯೂ ಆಗಿರುವ ಹಿರಿಯ ಕಾರ್ಗಿಲ್ ಯೋಧ ಅಳಲು ತೋಡಿಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.
ಕುಕಿ-ಝೋಮಿ ಸಮುದಾಯದ ಇನ್ನಿಬ್ಬರು ಮಹಿಳೆಯ ಪೈಕಿ ಒಬ್ಬರಾಗಿದ್ದ ಈ ಯೋಧರ ಪತ್ನಿಯನ್ನು ಮಣಿಪುರ
ಗುಂಪೊಂದು ಕುಕಿ-ಝೋಮಿ ಸಮುದಾಯದ ಇಬ್ಬರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆಸಿತ್ತಾದರೂ, ಈ ಘಟನೆಯ ವಿಡಿಯೊ ಜುಲೈ 19ರಂದು ಮಾತ್ರ ಬೆಳಕಿಗೆ ಬಂದಿತ್ತು. ಇದರಿಂದ ಈ ಘಟನೆಯ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿ, ಸಂಸತ್ತಿನಲ್ಲೂ ಪ್ರತಿಧ್ವನಿಸಿತ್ತು.
"ಅಲ್ಲಿಯವರೆಗೆ ಪೊಲೀಸರಾಗಲಿ ಅಥವಾ ಸರ್ಕಾರವಾಗಲಿ ನಮ್ಮನ್ನು ಈ ಕುರಿತು ಸಂಪರ್ಕಿಸಿರಲೂ ಇಲ್ಲ" ಎಂದು ಮೇ 18ರವರೆಗೆ ಕಾಂಗ್ಪೋಕ್ಪಿ ಜಿಲ್ಲೆಯ ಸಾಯಿಕುಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಶೂನ್ಯ ಪ್ರಾಥಮಿಕ ಮಾಹಿತಿ ವರದಿಗಳ ನಂತರ ದೂರು ನೀಡಿದ್ದ ಈ ಯೋಧ The Indian Express ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ಈ ಘಟನೆಯ ವಿರುದ್ಧ ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ವಿಡಿಯೊ ಬಿಡುಗಡೆಯಾಗುವವರೆಗೂ ನಾವು ಏನಾಗಿದೆ ಎಂದು ಹೇಳಿದರೂ ಯಾರೂ ನಂಬುತ್ತಿರಲಿಲ್ಲ" ಎಂದು ಸಂತ್ರಸ್ತ ಮಹಿಳೆಯರನ್ನು ಇರಿಸಲಾಗಿರುವ ಚುರಾಚಂದಪುರ್ ಪಟ್ಟಣದ ಕಾಲೇಜು ಕೊಠಡಿಯೊಂದರಲ್ಲಿ ಕುಳಿತುಕೊಂಡು ಅವರು ಅಳಲು ತೋಡಿಕೊಂಡಿದ್ದಾರೆ.
ಸದ್ಯ ನಿವೃತ್ತರಾಗಿರುವ ಈ ಯೋಧರಿಗೆ 30 ವರ್ಷಗಳ ಅವಧಿಯ ಸೇನಾ ವೃತ್ತಿ ಜೀವನವಿದೆ. ಅವರು ಅಸ್ಸಾಂ ರೆಜಿಮೆಂಟ್ಗೆ ಸೈನಿಕರಾಗಿ ಸೇರ್ಪಡೆಯಾದಾಗ ಕೇವಲ 18 ವರ್ಷ ವಯಸ್ಸಿನವರಾಗಿದ್ದರು. ಸಾಕಷ್ಟು ಪದಕಗಳೊಂದಿಗೆ ತಮ್ಮ ಗ್ರಾಮವು ಹೆಮ್ಮೆ ಪಡುವಂತೆ ಹಾಗೂ ಯುವಕರ ಸೇನಾ ಸೇರ್ಪಡೆಗೆ ಪ್ರೇರಣೆಯಾಗುವಂತೆ 2000ರಲ್ಲಿ ಸುಬೇದಾರ್ ಹುದ್ದೆಯಿಂದ ನಿವೃತ್ತರಾಗಿದ್ದರು.