"ಏನಾಯಿತೆಂದು ಯಾರಿಗೂ ತಿಳಿದಿಲ್ಲ": ಬಾಲಾಕೋಟ್ ಸರ್ಜಿಕಲ್ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರೇವಂತ್ ರೆಡ್ಡಿ
ರೇವಂತ್ ರೆಡ್ಡಿ | PC : PTI
ಹೈದರಾಬಾದ್: 2019ರಲ್ಲಿ ಪಾಕಿಸ್ತಾನದ ಬಾಲಾಕೋಟ್ ಭಾರತೀಯ ವಾಯು ಪಡೆಯು ನಡೆಸಿದ್ದ ಸರ್ಜಿಕಲ್ ದಾಳಿಯ ನೈಜತೆ ಕುರಿತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ.
ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೇವಂತ್ ರೆಡ್ಡಿ, “ಬಾಲಾಕೋಟ್ ಮೇಲೆ ನಡೆದಿದೆ ಎಂದು ಹೇಳಲಾಗಿರುವ ವೈಮಾನಿಕ ದಾಳಿಯ ಬಗ್ಗೆ ಯಾರಿಗೂ ಖಚಿತತೆ ಇಲ್ಲ. ಭಾರತದ ಭದ್ರತೆಯನ್ನು ಖಾತರಿಪಡಿಸುವ ಹೊಣೆಗಾರಿಕೆಯು ನಮ್ಮ ಬಳಿ (ಕಾಂಗ್ರೆಸ್) ಇದ್ದಿದ್ದರೆ, ನಾವು ಅದನ್ನು ಯಾರೊಬ್ಬರ ಕೈಗೂ ನೀಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ಬಿಜೆಪಿಯು ಪುಲ್ವಾಮಾ ದಾಳಿ ಹಾಗೂ ಭಾರತೀಯ ವಾಯುಪಡೆಯು ನಡೆಸಿದ ಪ್ರತಿ ದಾಳಿಯಿಂದ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುತ್ತಿದೆ ಎಂದು ಅವರು ದೂರಿದರು.
“ನೀವೇನು ಮಾಡುತ್ತಿದ್ದಿರಿ? ಪುಲ್ವಾಮಾ ದಾಳಿಯಾಗಲು ನೀವು ಏಕೆ ಅವಕಾಶ ನೀಡಿದಿರಿ? ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸಲು ನೀವು ಏನು ಕ್ರಮ ಕೈಗೊಂಡಿರಿ? ನಿಮ್ಮ ಅಧೀನದಲ್ಲಿ ಗುಪ್ತಚರ ದಳ (ಐಬಿ) ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ(ರಾ)ದ ನೆರವನ್ನು ಏಕೆ ಪಡೆಯಲಿಲ್ಲ? ಇದು ನಿಮ್ಮ ವೈಫಲ್ಯ” ಎಂದು ಅವರು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರಕಾರವನ್ನು ಪರಾಭವಗೊಳಿಸಿ ಎಂದು ತೆಲಂಗಾಣದ ಮುಖ್ಯಮಂತ್ರಿ ಜನರಿಗೆ ಮನವಿ ಮಾಡಿದರು.
“ಪ್ರಧಾನಿ ಮೋದಿಯ ಪಾಲಿಗೆ ಎಲ್ಲವೂ ಚುನಾವಣೆಯನ್ನು ಗೆಲ್ಲುವುದಾಗಿದೆ. ಅವರ ಆಲೋಚನಾ ಧಾಟಿಯು ದೇಶಕ್ಕೆ ಒಳಿತಲ್ಲ. ಮೋದಿ ಹಾಗೂ ಬಿಜೆಪಿಯಿಂದ ಕಳಚಿಕೊಳ್ಳುವ ಸಮಯವು ದೇಶಕ್ಕೆ ಬಂದಿದೆ. ಅವರು ಪುಲ್ವಾಮಾ ದಾಳಿಯನ್ನು ತಡೆಯುವಲ್ಲಿ ವಿಫಲವಾದರು. ಗುಪ್ತಚರ ದಳವು ಏನು ಮಾಡುತ್ತಿತ್ತು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.