ಹಬ್ಬಗಳಲ್ಲಿ ಆನೆಗಳನ್ನು ಬಳಸುವುದನ್ನು ಯಾವುದೇ ಧರ್ಮವು ಕಡ್ಡಾಯಗೊಳಿಸಿಲ್ಲ: ಕೇರಳ ಹೈಕೋರ್ಟ್
ಹಬ್ಬಗಳಲ್ಲಿ ಆನೆಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ಸೂಚಿಸಿದ ನ್ಯಾಯಾಲಯ
ಸಾಂದರ್ಭಿಕ ಚಿತ್ರ (PTI)
ಕೇರಳ: ಹಬ್ಬಗಳಲ್ಲಿ ಆನೆಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ಕೇರಳ ಹೈಕೋರ್ಟ್ ಸೂಚನೆ ನೀಡಿದ್ದು, ಹಬ್ಬಗಳಲ್ಲಿ ಆನೆಗಳನ್ನು ಬಳಸುವುದನ್ನು ಯಾವುದೇ ಧರ್ಮವು ಕಡ್ಡಾಯಗೊಳಿಸುವುದಿಲ್ಲ ಎಂದು ಹೇಳಿದೆ.
ಉತ್ಸವಗಳಲ್ಲಿ ಮೆರವಣಿಗೆ ನಡೆಸುವ ಆನೆಗಳ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್, ಆನೆಗಳ ಮೆರವಣಿಗೆಗೆ ಸಮಯದ ಮಿತಿ ಸೇರಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಪ್ರಾಣಿಗಳ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರದ ನಿಷ್ಕ್ರಿಯತೆಗೆ ಸಂಬಂಧಿಸಿದ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡ ಅರ್ಜಿ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಪಿ ಗೋಪಿನಾಥ್ ಅವರ ವಿಭಾಗೀಯ ಪೀಠವು, ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ಸೆರೆಯಲ್ಲಿದ್ದ ಶೇ.33ರಷ್ಟು ಆನೆಗಳು ಸಾವನ್ನಪ್ಪಿವೆ ಎಂದು ಕಳವಳ ವ್ಯಕ್ತಪಡಿಸಿದೆ. Kerala Captive Elephants (Management and Maintenance) Rules, 2012ನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ವನ್ಯಜೀವಿ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ನಿರ್ದೇಶನವನ್ನು ಅನುರಿಸಬೇಕೆಂದು ನ್ಯಾಯಾಲಯ ಹೇಳಿದೆ.
ಉತ್ಸವಗಳಲ್ಲಿ ಆನೆಗಳ ಬಳಕೆ ಬಗ್ಗೆ ನ್ಯಾಯಾಲಯ ಮಾರ್ಗ ಸೂಚಿ ಹೊರಡಿಸಿದೆ. ಮಾರ್ಗಸೂಚಿಗಳ ಪ್ರಕಾರ, ಆನೆಗಳಿಗೆ ಎರಡು ಪ್ರದರ್ಶನಗಳ(ಉತ್ಸವ ಅಥವಾ ಕಾರ್ಯಕ್ರಮ) ನಡುವೆ ಮೂರು ದಿನಗಳಿಗಿಂತ ಕಡಿಮೆಯಿಲ್ಲದ ವಿಶ್ರಾಂತಿಯನ್ನು ನೀಡಬೇಕು.
ಆನೆಗಳನ್ನು ಕಟ್ಟಿಹಾಕುವ ಸ್ಥಳ ಸ್ವಚ್ಛವಾಗಿರಬೇಕು ಮತ್ತು ಆ ಸ್ಥಳವು ವಿಶಾಲವಾಗಿರಬೇಕು. ಆನೆಗಳ ಪ್ರದರ್ಶನ ಅಥವಾ ಮೆರವಣಿಗೆ ವೇಳೆ ಸಾಕಷ್ಟು ಸ್ಥಳಾವಕಾಶ ಇರಬೇಕು. ಲಭ್ಯವಿರುವ ಸ್ಥಳದ ಆಧಾರದ ಮೇಲೆ ಎಷ್ಟು ಆನೆಗಳನ್ನು ಮೆರವಣಿಗೆ ನಡೆಸಬಹದು ಎಂದು ನಿರ್ಧರಿಸಬೇಕು. ಆನೆಗಳನ್ನು ಹಗಲಿನಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆಗೆ ಮಾಡಬಾರದು.
ಒಂದು ವೇಳೆ ಮೆರವಣಿಗೆ ನಡೆಸಿದರೂ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ನಡೆಸಬಾರದು.
ಕೇರಳದಲ್ಲಿ ಧಾರ್ಮಿಕ ಉತ್ಸವಗಳಲ್ಲಿ ಸೆರೆಯಲ್ಲಿರುವ ಆನೆಗಳನ್ನು ವ್ಯಾಪಕವಾಗಿ ಬಳಸುವುದನ್ನು ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಯ ಆಧಾರದ ಮೇಲೆ ಸಮರ್ಥಿಸಲು ಪ್ರಯತ್ನಿಸಲಾಗುತ್ತದೆ ಎಂದು ನ್ಯಾಯಾಲಯ ಇದೇ ವೇಳೆ ಹೇಳಿದೆ. ಯಾವುದೇ ಧರ್ಮ ಯಾವುದೇ ಅಗತ್ಯ ಧಾರ್ಮಿಕ ಆಚರಣೆಗಳಿಗೆ ಆನೆಗಳನ್ನು ಬಳಸುವುದನ್ನು ಕಡ್ಡಾಯಗೊಳಿಸುತ್ತವೆ ಎಂದು ನಾವು ನಂಬುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಹೈಕೋರ್ಟ್ ಹೊರಡಿಸಿದ ಮಾರ್ಗಸೂಚಿ ಕೇರಳದ ತ್ರಿಶೂರ್ ಪೂರಂ ಉತ್ಸವದ ಆಯೋಜಕರ ಅಸಮಾಧಾನಕ್ಕೆ ಕಾರಣವಾಗಿದೆ. ಉತ್ಸವದಲ್ಲಿ ಅಲಂಕೃತ ಆನೆಗಳು ಪ್ರಮುಖ ಆಕರ್ಷಣೆಯಾಗಿತ್ತು.