ಶಾಜಹಾನ್ ಶೇಖ್ ಬಂಧನಕ್ಕೆ ತಡೆ ವಿಧಿಸಿಲ್ಲ: ಹೈಕೋರ್ಟ್
ಶೇಖ್ ಶಾಜಹಾನ್ | Photo: NDTV
ಕೋಲ್ಕತಾ: ಪಶ್ಚಿಮಬಂಗಾಳದ ಸಂದೇಶ್ಖಾಲಿಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಭೂ ಅತಿಕ್ರಮಣದ ಆರೋಪಕ್ಕೆ ಒಳಗಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಶಾಜಹಾನ್ ಬಂಧನಕ್ಕೆ ಯಾವುದೇ ತಡೆ ವಿಧಿಸಿಲ್ಲ ಎಂದು ಕೋಲ್ಕತ್ತಾ ಉಚ್ಛ ನ್ಯಾಯಾಲಯ ಸೋಮವಾರ ಸ್ಪಷ್ಟಪಡಿಸಿದೆ.
ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಹಾಗೂ ಬುಡಕಟ್ಟು ಜನರ ಭೂಮಿ ಅತಿಕ್ರಮಣದ ಆರೋಪದ ಕುರಿತಂತೆ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯ ಶೇಖ್, ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ರಾಜ್ಯ ಗೃಹ ಕಾರ್ಯದರ್ಶಿ ಅವರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನಿರ್ದೇಶಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಜನವರಿ 5ರಂದು ದಾಳಿ ನಡೆದ ಬಳಿಕ ತಲೆಮರೆಸಿಕೊಂಡಿರುವ ಶೇಖ್ ಅವರನ್ನು ಈ ಪ್ರಕರಣದಲ್ಲಿ ಕಕ್ಷಿದಾರ ಎಂದು ಪ್ರತಿಪಾದಿಸಿ ಉಚ್ಛ ನ್ಯಾಯಾಲಯದ ರಿಜಿಸ್ಟ್ರಿ ದಿನಪತ್ರಿಕೆಗಳಿಗೆ ಸಾರ್ವಜನಿಕ ನೋಟಿಸು ನೀಡುವಂತೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಲಿಂಗಂ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರ್ದೇಶಿಸಿದೆ.
ಶೇಖ್ ಅವರನ್ನು ಬಂಧಿಸದಂತೆ ಪೊಲೀಸರಿಗೆ ತಡೆಯಾಜ್ಞೆ ಇದೆಯೇ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನ್ಯಾಯಾಲಯ ನಿಯೋಜಿತ ಆ್ಯಮಿಕಸ್ ಕ್ಯೂರಿ ಅವರು ಮನವಿ ಮಾಡಿದರು. ಇದಕ್ಕೆ ವಿಭಾಗೀಯ ನ್ಯಾಯ ಪೀಠ, ಅಂತಹ ಯಾವುದೇ ತಡೆ ಇಲ್ಲ. ಪೊಲೀಸರು ಅವರನ್ನು ಬಂಧಿಸಬಹುದು ಎಂದು ಹೇಳಿತು.
ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಪ್ರಕರಣದ ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಿತು.
ಸಂದೇಶ್ಖಾಲಿಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಭೂಕಬಳಿಕೆಯ ಆರೋಪಕ್ಕೆ ಒಳಗಾಗಿರುವ ಶಾಜಹಾನ್ ಶೇಖ್ ಅವರನ್ನು 7 ದಿನಗಳಲ್ಲಿ ಬಂಧಿಸಲಾಗುವುದು ಎಂದು ಟಿಎಂಸಿ ಹಿರಿಯ ನಾಯಕ ಕುನಾಲ್ ಘೋಷ್ ಅವರು ಸೋಮವಾರ ಹೇಳಿದ್ದಾರೆ.
‘‘ಶೇಕ್ ಶಾಜಹಾನ್ ಬಂಧನದ ಬಗ್ಗೆ ಅಭಿಷೇಕ್ ಬ್ಯಾನರ್ಜಿ ಅವರು ಸರಿಯಾದ ನಿಲುವು ಹೊಂದಿದ್ದಾರೆ. ಆದರೆ, ಈ ವಿಷಯ ನ್ಯಾಯಾಲಯದಲ್ಲಿ ಕಾನೂನಿನ ಗೊಜಲಿನಲ್ಲಿ ಸಿಲುಕಿಕೊಂಡಿತ್ತು. ಈ ಅವಕಾಶವನ್ನು ಬಳಸಿಕೊಂಡು ಪ್ರತಿಪಕ್ಷಗಳು ರಾಜಕೀಯ ಮಾಡಿದವು. ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ ಹಾಗೂ ಪೊಲೀಸ್ ಕ್ರಮಕ್ಕೆ ಅವಕಾಶ ನೀಡಿದ ಉಚ್ಛ ನ್ಯಾಯಾಲಯಕ್ಕೆ ಕೃತಜ್ಞತೆಗಳು. ಶಾಹಜಹಾನ್ ಅವರನ್ನು 7 ದಿನಗಳ ಒಳಗೆ ಬಂಧಿಸಲಾಗುವುದು’’ ಎಂದು ಘೋಷ್ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.