ತೈಲ ಆಮದುಗಳಿಗೆ ರೂಪಾಯಿಗಳಲ್ಲಿ ಪಾವತಿಗಳನ್ನು ಸ್ವೀಕರಿಸುವವರಿಲ್ಲ: ವರದಿ
Photo: PTI
ಹೊಸದಿಲ್ಲಿ: ಕಚ್ಚಾತೈಲಗಳ ಆಮದಿಗೆ ಹಣ ಪಾವತಿಸಲು ರೂಪಾಯಿಯ ಬಳಕೆಗೆ ಭಾರತವು ಒತ್ತು ನೀಡುತ್ತಿದೆಯಾದರೂ ಇದಕ್ಕೆ ನಿರೀಕ್ಷಿತ ಸ್ಪಂದನ ದೊರಕಿಲ್ಲ. ಪೂರೈಕೆದಾರರು ತಮ್ಮ ಆಯ್ಕೆಯ ಕರೆನ್ಸಿಯಲ್ಲಿ ಪರಿವರ್ತನೆಗಾಗಿ ಹಣದ ಮರುವರ್ಗಾವಣೆ ಮತ್ತು ಹೆಚ್ಚಿನ ವಹಿವಾಟು ವೆಚ್ಚಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ತೈಲ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ ಎಂದು ವರದಿಯಾಗಿದೆ.
ಅಂತರರಾಷ್ಟ್ರೀಯ ವ್ಯಾಪಾರ ರೂಢಿಯಂತೆ ಕಚ್ಚಾ ತೈಲದ ಆಮದಿಗಾಗಿ ಎಲ್ಲ ಒಪ್ಪಂದಗಳಿಗೆ ಪೂರ್ವನಿಯೋಜಿತ ಪಾವತಿ ಕರೆನ್ಸಿಯು ಅಮೆರಿಕದ ಡಾಲರ್ ಆಗಿದೆ. ಆದಾಗ್ಯೂ ಭಾರತೀಯ ಕರೆನ್ಸಿಯ ಜಾಗತೀಕರಣದ ಪ್ರಯತ್ನವಾಗಿ ಆರ್ಬಿಐ ಆಮದುದಾರರು ರಫ್ತುದಾರರಿಗೆ ರೂಪಾಯಿಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಿರುವುದಾಗಿ 2022,ಜು.11ರಂದು ಪ್ರಕಟಿಸಿತ್ತು.
ಈ ನಿಟ್ಟಿನಲ್ಲಿ ಕೆಲವು ಆಯ್ದ ದೇಶಗಳೊಂದಿಗೆ ತೈಲೇತರ ವ್ಯಾಪಾರದಲ್ಲಿ ಕೊಂಚ ಯಶಸ್ಸು ಕಂಡು ಬಂದಿದ್ದರೂ,ತೈಲ ರಫ್ತುದಾರರು ರೂಪಾಯಿಯನ್ನು ದೂರವೇ ಇಟ್ಟಿದ್ದಾರೆ,ರೂಪಾಯಿಗಳಲ್ಲಿ ಪಾವತಿಯನ್ನು ಸ್ವೀಕರಿಸಲು ಅವರು ಸಿದ್ಧರಿಲ್ಲ.
ವಿತ್ತವರ್ಷ 2022-23ರಲ್ಲಿ ತೈಲ ಮಾರಾಟ ಪಿಎಸ್ಯುಗಳು ಆಮದು ಮಾಡಿಕೊಂಡ ಕಚ್ಚಾತೈಲಕ್ಕೆ ಭಾರತೀಯ ರೂಪಾಯಿಯಲ್ಲಿ ಹಣಪಾವತಿ ಸಾಧ್ಯವಾಗಿಲ್ಲ. ಯುಎಇಯ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ಸೇರಿದಂತೆ ಕಚ್ಚಾತೈಲ ಪೂರೈಕೆದಾರರು ಆದ್ಯತೆಯ ಕರೆನ್ಸಿಯಲ್ಲಿ ಹಣದ ಮರುವರ್ಗಾವಣೆಯ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ ಮತ್ತು ವಿನಿಮಯ ದರ ಏರಿಳಿತಗಳ ಅಪಾಯದ ಜೊತೆಗೆ ಹಣದ ಪರಿವರ್ತನೆಗೆ ಸಂಬಂಧಿಸಿದ ಹೆಚ್ಚಿನ ವಹಿವಾಟು ವೆಚ್ಚಗಳನ್ನೂ ಎತ್ತಿ ತೋರಿಸಿದ್ದಾರೆ ಎಂದು ತೈಲ ಸಚಿವಾಲಯವು ಇಲಾಖಾ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.
ಸಚಿವಾಲಯದ ಹೇಳಿಕೆಗಳು ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಲಾದ ಸಮಿತಿಯ ವರದಿಯ ಭಾಗವಾಗಿವೆ. ಕಚ್ಚಾ ತೈಲ ಪೂರೈಕೆದಾರು ಹೆಚ್ಚುವರಿ ವಹಿವಾಟು ವೆಚ್ಚಗಳನ್ನು ತನಗೆ ವರ್ಗಾಯಿಸಿರುವುದರಿಂದ ತಾನು ಅಧಿಕ ವಹಿವಾಟು ವೆಚ್ಚಗಳನ್ನು ಭರಿಸುವಂತಾಗಿದೆ ಎಂದು ಭಾರತೀಯ ತೈಲ ನಿಗಮ (ಐಒಸಿ)ವು ತಿಳಿಸಿರುವುದಾಗಿ ಸಚಿವಾಲಯವು ಹೇಳಿದೆ.
ಪಾಲುದಾರ ವ್ಯಾಪಾರ ದೇಶದಲ್ಲಿ ‘ರುಪೀ ವೊಸ್ಟ್ರೊ’ ಖಾತೆಗಳನ್ನು ತೆರೆಯಲು ಆರ್ಬಿಐ ಕಳೆದ ವರ್ಷ ಅನುಮತಿ ನೀಡಿತ್ತು ಎಂದು ಸಚಿವಾಲಯವು ತಿಳಿಸಿದೆ. ಈ ಕಾರ್ಯವಿಧಾನದಡಿ ಆಮದುಗಳನ್ನು ಮಾಡಿಕೊಳ್ಳುವ ಭಾರತೀಯ ಆಮದುದಾರರು ಭಾರತೀಯ ರೂಪಾಯಿಗಳಲ್ಲಿ ಹಣವನ್ನು ಪಾವತಿ ಮಾಡುತ್ತಾರೆ ಮತ್ತು ಅದನ್ನು ಸಾಗರೋತ್ತರ ಮಾರಾಟಗಾರರು/ಪೂರೈಕೆದಾರರಿಂದ ಸರಕುಗಳು ಅಥವಾ ಸೇವೆಗಳ ಪೂರೈಕೆಗಾಗಿ ಇನ್ವಾಯ್ಸ್ಗೆ ಅನುಗುಣವಾಗಿ ಪಾಲುದಾರ ದೇಶದ ಕರೆಸ್ಪಾಂಡಿಂಗ್ ಬ್ಯಾಂಕ್ ನ ವಿಶೇಷ ವೊಸ್ಟ್ರೊ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ.
ಪೂರೈಕೆದಾರರು ಈ ಸಂಬಂಧ ನಿಯಂತ್ರಕ ಮಾರ್ಗಸೂಚಿಗಳನ್ನು ಅನುಸರಿಸುತ್ತಾರಾದರೆ ಕಚ್ಚಾತೈಲ ಆಮದುಗಳಿಗೆ ರೂಪಾಯಿಗಳಲ್ಲಿ ಪಾವತಿಸಬಹುದು ಎಂದು ಹೇಳಿರುವ ಸಚಿವಾಲಯವು,ಪ್ರಸ್ತುತ ರಿಲಾಯನ್ಸ್ ಇಂಡಸ್ಟ್ರೀಸ್ ಲಿ. ಮತ್ತು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಚ್ಚಾತೈಲ ಪೂರೈಕೆಗಾಗಿ ಭಾರತೀಯ ರೂಪಾಯಿಗಳನ್ನು ಪಾವತಿಸಲು ಯಾವುದೇ ಕಚ್ಚಾತೈಲ ಪೂರೈಕೆದಾರರೊಂದಿಗೆ ಒಪ್ಪಂದವನ್ನು ಹೊಂದಿಲ್ಲ ಎಂದು ತಿಳಿಸಿದೆ.
ಭಾರತವು ವಿಶ್ವದ ಮೂರನೇ ಅತ್ಯಂತ ದೊಡ್ಡ ಇಂಧನ ಬಳಕೆದಾರ ದೇಶವಾಗಿದೆ. ದೇಶಿಯ ಉತ್ಪಾದನೆಯು ಅದರ ಕಚ್ಚಾತೈಲ ಅಗತ್ಯದ ಶೇ.15ಕ್ಕೂ ಕಡಿಮೆಯಿದೆ,ಹೀಗಾಗಿ ದೇಶವು ಉಳಿದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಕಚ್ಚಾತೈಲವನ್ನು ರಿಫೈನರಿಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆಗಿ ಪರಿವರ್ತಿಸಲಾಗುತ್ತದೆ.