ವರುಣ್ ಗೆ ಟಿಕೆಟ್ ನಿರಾಕರಿಸಿರುವುದು ಅಚ್ಚರಿಯೇನಲ್ಲ: ಮೇನಕಾ ಸಮರ್ಥನೆ
ಮೇನಕಾ ಗಾಂಧಿ Photo: PTI
ಲಕ್ನೋ: ಪಿಲಿಭಿಟ್ ಕ್ಷೇತ್ರದ ಮೂರು ಬಾರಿಯ ಸಂಸದ ವರುಣ್ ಗಾಂಧಿಗೆ ಟಿಕೆಟ್ ನಿರಾಕರಿಸಿರುವುದು ಅಚ್ಚರಿಯೂ ಅಲ್ಲ. ಇದರಿಂದ ಆಘಾತವೂ ಆಗಿಲ್ಲ ಎಂದು ವರುಣ್ ತಾಯಿ, ಮಾಜಿ ಕೇಂದ್ರ ಸಚಿವೆ ಹಾಗೂ ಸುಲ್ತಾನ್ ಪುರ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
"ಬಿಜೆಪಿ, ಕಾರ್ಯಕರ್ತ ಆಧರಿತ ಪಕ್ಷ. ಇಲ್ಲಿ ಕೈಗೊಂಡ ನಿರ್ಧಾರಕ್ಕೆ ಪ್ರತಿಯೊಬ್ಬರೂ ತಲೆಬಾಗಬೇಕು" ಎಂದು ಅವರು ಹೈಮಾಂಡ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಪಿಲಿಭಿಟ್ ಕ್ಷೇತ್ರದಿಂದ ಬಿಜೆಪಿ ವರುಣ್ ಗಾಂಧಿಗೆ ಟಿಕೆಟ್ ನಿರಾಕರಿಸಿ, ಉತ್ತರ ಪ್ರದೇಶದ ಲೋಕೋಪಯೋಗಿ ಸಚಿವ ಜಿತಿನ್ ಪ್ರಸಾದ್ ಅವರನ್ನು ಕಣಕ್ಕೆ ಇಳಿಸಿದೆ. ಹಣದುಬ್ಬರ ಮತ್ತು ನಿರುದ್ಯೋಗ ವಿಚಾರದಲ್ಲಿ ವರುಣ್ ಹಲವು ಕಾಲದಿಂದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಾ ಬಂದಿದ್ದರು.
ಪ್ರಮುಖ ಸುದ್ದಿವಾಹಿನಿಯೊಂದರ ಜತೆ ನಡೆಸಿದ ಸಂವಾದದಲ್ಲಿ ಮೇನಕಾ ಗಾಂಧಿ, "ಮಗನ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ದೇಶಕ್ಕೆ ಧನಾತ್ಮಕ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾರೆ. ವರುಣ್ ಭವಿಷ್ಯದ ಹಾದಿಯ ಬಗ್ಗೆ ಕೇಳಿದ ಪ್ರಶ್ನೆಗೆ, "ಅವರು ಬೇರೆ ಪಕ್ಷ ಸೇರುತ್ತಾರೆಯೇ ಎಂಬ ಬಗ್ಗೆ ಕಲ್ಪನೆ ಇಲ್ಲ" ಎಂದು ಸ್ಪಷ್ಟಪಡಿಸಿದರು.