ಈ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಚುಕಿದೆ: ಸಂಸದರ ಅಮಾನತುಗೊಳಿಸಿದ ಕ್ರಮಕ್ಕೆ ಸೋನಿಯಾ ಗಾಂಧಿ ಟೀಕೆ
ಸೋನಿಯಾ ಗಾಂಧಿ (PTI)
ಹೊಸದಿಲ್ಲಿ: ನ್ಯಾಯೋಚಿತ ಮತ್ತು ಕಾನೂನುಬದ್ಧ ಬೇಡಿಕೆಯನ್ನು ಮುಂದಿಟ್ಟಿದ್ದಕ್ಕಾಗಿ ಈ ಸರ್ಕಾರ ಪ್ರಜಾಪ್ರಭುತ್ವದ ಕತ್ತನ್ನು ಹಿಸುಕಿದೆ ಎಂದು ಲೋಕಸಭೆಯಿಂದ 141 ವಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಕ್ರಮವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕಟುವಾಗಿ ಟೀಕಿಸಿದ್ದಾರೆ.
“ಈ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಚುಕಿದೆ. ಈ ಹಿಂದೆ ಯಾವತ್ತೂ ಇಷ್ಟೊಂದು ವಿಪಕ್ಷ ಸಂಸದರನ್ನು ಸದನದಿಂದ ಅಮಾನತುಗೊಳಿಸಲಾಗಿಲ್ಲ. ಅದು ಕೂಡ ಒಂದು ನ್ಯಾಯೋಚಿತ ಬೇಡಿಕೆ ಮುಂದಿರಿಸಿದ್ದಕ್ಕೆ,” ಎಂದು ಸೋನಿಯಾ ಹೇಳಿದ್ದಾರೆ.
ಡಿಸೆಂಬರ್ 13ರಂದು ನಡೆದ ಅಭೂತಪೂರ್ವ ಭದ್ರತಾ ವೈಫಲ್ಯದ ಕುರಿತು ಗೃಹ ಸಚಿವರ ಹೇಳಿಕೆಯನ್ನಷ್ಟೇ ವಿಪಕ್ಷ ಸಂಸದರು ಆಗ್ರಹಿಸಿದ್ದಾರೆ, ಆದರೆ ಈ ಬೇಡಿಕೆಯ ಕುರಿತಂತೆ ತೋರಿದ ಅಹಂಕಾರದ ವರ್ತನೆಯನ್ನು ಬಣ್ಣಿಸಲು ಪದಗಳೇ ಇಲ್ಲ,” ಎಂದು ಸೋನಿಯಾ ಹೇಳಿದ್ದಾರೆ.
“ಡಿಸೆಂಬರ್ 13 ರ ಘಟನೆ ಅಕ್ಷಮ್ಯಾರ್ಹ ಮತ್ತು ಅಸಮರ್ಥನೀಯ, ಈ ಕುರಿತು ಹೇಳಿಕೆ ನೀಡಲು ಪ್ರಧಾನಿಗೆ ನಾಲ್ಕು ದಿನಗಳು ಬೇಕಾಯಿತು, ಅದು ಕೂಡ ಸಂಸತ್ತಿನ ಹೊರಗೆ ಹೇಳಿಕೆ ನೀಡಿದ್ದಾರೆ. ಹೀಗೆ ಮಾಡುವ ಮೂಲಕ ಅವರು ಸದನಕ್ಕೆ ಮತ್ತು ದೇಶದ ಜನತೆಗೆ ಅಗೌರವ ಸೂಚಿಸಿದಂತೆ. ಬಿಜೆಪಿ ಈಗಿನ ಸ್ಥಿತಿಯಲ್ಲಿ ವಿಪಕ್ಷದಲ್ಲಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿತ್ತು ಎಂಬುದನ್ನು ನಿಮ್ಮ ಊಹೆಗೆ ಬಿಟ್ಟಿದ್ದೇನೆ,” ಎಂದು ಸೋನಿಯಾ ಹೇಳಿದರು.