"ವಿಧಿಯಾಟವನ್ನು ಯಾರೂ ತಡೆಯಲಾಗದು, ಒಂದು ದಿನ ಎಲ್ಲರೂ ಸಾಯಬೇಕಿದೆ": ಹಾತ್ರಸ್ ಕಾಲ್ತುಳಿತ ಘಟನೆ ಕುರಿತು ಭೋಲೆ ಬಾಬಾ ಪ್ರತಿಕ್ರಿಯೆ
ಸ್ವಘೋಷಿತ ದೇವಮಾನವ ಭೋಲೆ ಬಾಬಾ (Photo: PTI)
ಲಕ್ನೋ: ಹಾತ್ರಸ್ ಕಾಲ್ತುಳಿತ ಘಟನೆಯಿಂದ ತಾವು ಬಹಳ ನೊಂದಿರುವುದಾಗಿ ಸ್ವಘೋಷಿತ ದೇವಮಾನವ ಭೋಲೆ ಬಾಬಾ ಹೇಳಿದ್ದಾರೆ. ಅದೇ ಸಮಯ ವಿಧಿಯಾಟವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಹಾಗೂ ಒಂದು ದಿನ ಎಲ್ಲರೂ ಸಾಯಬೇಕಿದೆ ಎಂದಿದ್ದಾರೆ.
“ಯಾವುದು ಸಂಭವಿಸಬೇಕಿದೆಯೋ ಅದನ್ನು ಯಾರಿಂದಲೂ ತಡೆಯಲಾಗುವುದಿಲ್ಲ,” ಎಂದು ತಮ್ಮ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟ ದುರಂತ ಸಂಭವಿಸಿದ 15 ದಿನಗಳ ನಂತರ ಅವರು ಹೇಳಿದರು.
ಕಾಲ್ತುಳಿತದ ಹಿಂದೆ ಸಂಚಿದೆ ಎಂಬ ಮಾತನ್ನೂ ಅವರು ಹೇಳಿಕೊಂಡರು. ಘಟನೆ ನಡೆದ ಬೆನ್ನಲ್ಲೇ ಅವರ ವಕೀಲ ಎ ಪಿ ಸಿಂಗ್ ಕೂಡ ಇದೇ ಮಾತುಗಳನ್ನಾಡಿದ್ದರು.
ಘಟನೆ ಬಗ್ಗೆ ಮಾತನಾಡಿದ ಭೋಲೆ ಬಾಬಾ “ಜುಲೈ 2ರ ಘಟನೆ ನಂತರ ನಾನು ತುಂಬಾ ಖಿನ್ನನಾದೆ. ಆದರೆ ನಡೆಯಬೇಕಾಗಿರುವುದರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನನ್ನ ವಕೀಲರು ಮತ್ತು ಪ್ರತ್ಯಕ್ಷದರ್ಶಿ ಸಾಕ್ಷಿಗಳು ವಿಷಕಾರಿ ಸ್ಪ್ರೇ ಬಗ್ಗೆ ಹೇಳಿರುವುದು ಸಂಪೂರ್ಣ ನಿಜ. ಖಂಡಿತವಾಗಿಯೂ ಸಂಚಿತ್ತು,” ಎಂದು ಅವರು ಹೇಳಿದರು.
ಸನಾತನ ಮತ್ತು ಸತ್ಯದ ಆಧಾರದಲ್ಲಿ ನಡೆಯುವ ತಮ್ಮ ಸಂಸ್ಥೆಗೆ ಕೆಟ್ಟ ಹೆಸರು ತರುವ ಯತ್ನ ಕೆಲವರಿಂದ ನಡೆಯುತ್ತಿದೆ. ನಮಗೆ ಎಸ್ಐಟಿ ಮತ್ತು ನ್ಯಾಯಾಂಗ ಆಯೋಗದ ಮೇಲೆ ಪೂರ್ಣ ವಿಶ್ವಾಸವಿದೆ. ಸತ್ಯ ಒಂದು ದಿನ ಹೊರಬರಲಿದೆ ಎಂಬ ವಿಶ್ವಾಸವನ್ನು ಮಾನವ ಮಂಗಲ್ ಮಿಲನ್ ಸದ್ಭಾವನಾ ಸಮಾಗಮ್ನ ಎಲ್ಲಾ ಅನುಯಾಯಿಗಳು ನಂಬಿದ್ದಾರೆ ಎಂದು ಅವರು ಹೇಳಿದರಲ್ಲದೆ ಘಟನೆಯಲ್ಲಿ ಮೃತಪಟ್ಟ ಎಲ್ಲಾ ಕುಟುಂಬಗಳೊಂದಿಗೆ ನಾವಿದ್ದೇವೆ ಎಂದು ಹೇಳಿದರು.