ರತನ್ ಟಾಟಾ ಉತ್ತರಾಧಿಕಾರಿಯಾಗಲಿದ್ದಾರೆಯೇ ನೋಯೆಲ್ ಟಾಟಾ?
ನೋಯೆಲ್ ನವಲ್ ಟಾಟಾ (Photo credit: pune.news)
ಮುಂಬೈ: ಟಾಟಾ ಸನ್ಸ್ನ ಗೌರವಾಧ್ಯಕ್ಷ ರತನ್ ಟಾಟಾ ಅವರು ಬುಧವಾರ ರಾತ್ರಿ ಅ.9ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.
ರತನ್ ಟಾಟಾ ಅವರ ನಿಧನದ ನಂತರ ಅವರ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಕುತೂಹಲ ಮೂಡಿದೆ. ರತನ್ ಟಾಟಾ ಅವರ ಮಲಸಹೋದರ ನೋಯೆಲ್ ನವಲ್ ಟಾಟಾ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.
ನೋಯೆಲ್ ಎನ್. ಟಾಟಾ ಅವರು 40 ವರ್ಷಗಳಿಂದ ಟಾಟಾ ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾರೆ. ಪ್ರಸ್ತುತ ಟ್ರೆಂಟ್, ಟಾಟಾ ಇಂಟರ್ನ್ಯಾಷನಲ್ ಲಿಮಿಟೆಡ್, ವೋಲ್ಟಾಸ್ ಮತ್ತು ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಶನ್ನ ಅಧ್ಯಕ್ಷರಾಗಿ ಮತ್ತು ಟೈಟಾನ್ ಕಂಪನಿ ಲಿಮಿಟೆಡ್, ಟಾಟಾ ಸ್ಟೀಲ್ನ ಉಪಾಧ್ಯಕ್ಷರಾಗಿ ವಿವಿಧ ಟಾಟಾ ಗ್ರೂಪ್ ಕಂಪನಿಗಳ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್ನ ಮಂಡಳಿಯಲ್ಲಿ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಆಗಸ್ಟ್ 2010 ಮತ್ತು ನವೆಂಬರ್ 2021 ರ ನಡುವೆ ಟಾಟಾ ಗ್ರೂಪ್ನ ವ್ಯಾಪಾರ ಮತ್ತು ವಿತರಣಾ ವಿಭಾಗವಾದ ಟಾಟಾ ಇಂಟರ್ನ್ಯಾಷನಲ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಅವರನ್ನು ನಿಯೋಜಿಸಲಾಗಿತ್ತು. ಅಲ್ಲಿ ಅವರು 500 ಮಿಲಿಯನ್ ಡಾಲರ್ ವಹಿವಾಟಿನಿಂದ 3 ಬಿಲಿಯನ್ ಡಾಲರ್ ಗೆ ಕಂಪೆನಿಯ ವಹಿವಾಟು ಹೆಚ್ಚಿಸಿದ್ದರು.
ಟಾಟಾ ಇಂಟರ್ನ್ಯಾಶನಲ್ ಗೂ ಮೊದಲು, ನೋಯೆಲ್ ಟಾಟಾ ಅವರು ಟ್ರೆಂಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಟ್ರೆಂಟ್ನ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. 1998 ರಲ್ಲಿ ಒಂದು ಮಳಿಗೆಯಿಂದ ಪ್ರಾರಂಭವಾದ ಟ್ರೆಂಟ್ ಇಂದು 700 ಕ್ಕೂ ಹೆಚ್ಚು ಮಳಿಗೆ ಹೊಂದಿದೆ.
ನೋಯೆಲ್ ಟಾಟಾ ಅವರು ಬ್ರಿಟನ್ ನ ಸಸೆಕ್ಸ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. INSEAD ನಿಂದ ಇಂಟರ್ನ್ಯಾಷನಲ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ (IEP) ಪೂರ್ಣಗೊಳಿಸಿದ್ದಾರೆ.
ನೋಯೆಲ್ ಟಾಟಾ ಅವರು ನೇವಲ್ H. ಟಾಟಾ ಮತ್ತು ಸಿಮೋನ್ N. ಟಾಟಾ ಅವರ ಪುತ್ರ. ನೋಯೆಲ್ ಅವರ ಮೂವರು ಮಕ್ಕಳು 5 ಟಾಟಾ ಟ್ರಸ್ಟ್ ಬೋರ್ಡ್ ನಲ್ಲಿದ್ದಾರೆ.