ನೋಯ್ಡ: 5 ದಿನಗಳ ‘ಡಿಜಿಟಲ್ ಬಂಧನ’’ಕ್ಕೊಳಗಾದ ಕುಟುಂಬ; 1.1 ಕೋಟಿ ರೂ. ಸುಲಿಗೆ!

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಸರಕಾರಿ ಅಧಿಕಾರಿಗಳಂತೆ ನಟಿಸಿದ ವಂಚಕರು ಉತ್ತರಪ್ರದೇಶದ ನೋಯ್ಡದ ಕುಟುಂಬವೊಂದರ ಸದಸ್ಯರನ್ನು ಐದು ದಿನಗಳ ಕಾಲ ‘‘ಡಿಜಿಟಲ್ ಬಂಧನ’’ದಲ್ಲಿರಿಸಿ ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ ಒಂದರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನನ್ನ ಸಿಮ್ ಕಾರ್ಡನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಬೆದರಿಸಿದನು ಹಾಗೂ ಭಾರತೀಯ ಟೆಲಿಕಾಮ್ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ಕ್ಕೆ ಕರೆ ಮಾಡುವಂತೆ ಸೂಚಿಸಿದನು ಎಂಬುದಾಗಿ ಚಂದ್ರಭನ್ ಪಲಿವಾಲ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಳಿಕ ಅದೇ ವ್ಯಕ್ತಿ ಕರೆ ಮಾಡಿ, ನನ್ನ ಪ್ರಕರಣವನ್ನು ಮುಂಬೈ ಸೈಬರ್ ಕ್ರೈಮ್ ಶಾಖೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದನು. ಹತ್ತು ನಿಮಿಷಗಳ ಬಳಿಕ, ಐಪಿಎಸ್ ಅಧಿಕಾರಿ ಎಂಬುದಾಗಿ ಹೇಳಿಕೊಂಡ ಇನ್ನೋರ್ವ ವ್ಯಕ್ತಿ ವೀಡಿಯೊ ಕರೆ ಮಾಡಿದನು ಎಂದು ಡಿಸಿಪಿ (ಸೈಬರ್ ಅಪರಾಧ) ಪ್ರೀತಿ ಯಾದವ್ ಪಿಟಿಐಗೆ ತಿಳಿಸಿದ್ದಾರೆ.
ನಾನು ಸುಲಿಗೆ ಮಾಡುತ್ತಿದ್ದೇನೆ ಮತ್ತು ನನ್ನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 24 ಮೊಕದ್ದಮೆಗಳು ದಾಖಲಾಗಿವೆ ಎಂದು ಆ ನಕಲಿ ಐಪಿಎಸ್ ಅಧಿಕಾರಿ ಹೇಳಿದನು. ಅದೂ ಅಲ್ಲದೆ, ಅಕ್ರಮ ಹಣ ವರ್ಗಾವಣೆಗಾಗಿ ನನ್ನ ವಿರುದ್ಧ ಸಿಬಿಐ ಕೂಡ ತನಿಖೆ ಮಾಡುತ್ತಿದೆ ಎಂದು ಅವನು ಹೇಳಿದನು ಎಂದು ದೂರುದಾರರು ಆರೋಪಿಸಿದ್ದಾರೆ.
ನನ್ನ ಪತ್ನಿ ಮತ್ತು ಮಗಳನ್ನೂ ‘‘ಡಿಜಿಟಲ್ ಬಂಧನ’’ದಲ್ಲಿರಿಸಲಾಯಿತು ಎಂದು ಹೇಳಿದ ಅವರು, ಅವರು ಹೇಳಿದಷ್ಟು ಹಣವನ್ನು ಕೊಡದಿದ್ದರೆ ಶೀಘ್ರವೇ ನಮ್ಮೆಲ್ಲರನ್ನೂ ಬಂಧಿಸಲಾಗುತ್ತದೆ ಎಂದು ನಕಲಿ ಪೊಲೀಸ್ ಅಧಿಕಾರಿ ಬೆದರಿಸಿದನು ಎಂದು ಸಂತ್ರಸ್ತ ವ್ಯಕ್ತಿ ದೂರಿದ್ದಾರೆ.
ಬಳಿಕ, ಐದು ದಿನಗಳ ಅವಧಿಯಲ್ಲಿ ಸಂತ್ರಸ್ತನು ವಂಚಕರು ಸೂಚಿಸಿದ ವಿವಿಧ ಖಾತೆಗಳಿಗೆ 1.10 ಕೋಟಿ ರೂ. ಮೊತ್ತವನ್ನು ವರ್ಗಾಯಿಸಿದರು ಎಂದು ಪೊಲೀಸ್ ಅಧಿಕಾರಿ ಪ್ರೀತಿ ಯಾದವ್ ತಿಳಿಸಿದರು.