ಎಂಸಿಡಿಗೆ ಸದಸ್ಯರ ನಾಮನಿರ್ದೇಶನ | ಲೆಫ್ಟಿನಂಟ್ ಗವರ್ನರ್ ಹಕ್ಕು ಎತ್ತಿ ಹಿಡಿದ ಸುಪ್ರೀಂ ತೀರ್ಪು ಪ್ರಜಾಪ್ರಭುತ್ವಕ್ಕೆ ಭಾರೀ ಹೊಡೆತ : ಆಪ್
ಹೊಸದಿಲ್ಲಿ : ದಿಲ್ಲಿ ಮಹಾನಗರ ಪಾಲಿಕೆ(ಎಂಸಿಡಿ)ಗೆ ಸದಸ್ಯರ ನಾಮನಿರ್ದೇಶನದ ಲೆಫ್ಟಿನಂಟ್ ಗವರ್ನರ್ ಅವರ ಹಕ್ಕನ್ನು ಎತ್ತಿಹಿಡಿದಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ತನ್ನ ಪಕ್ಷವು ‘ಗೌರವಪೂರ್ವಕವಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಸೋಮವಾರ ಹೇಳಿದ ಹಿರಿಯ ಆಪ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು,ಈ ತೀರ್ಪು ಭಾರತದ ಪ್ರಜಾಪ್ರಭುತ್ವಕ್ಕೆ ಭಾರೀ ಹೊಡೆತವಾಗಿದೆ ಎಂದು ಬಣ್ಣಿಸಿದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಚುನಾಯಿತ ಸರಕಾರವನ್ನು ಬೈಪಾಸ್ ಮಾಡುವ ಹಕ್ಕನ್ನು ಲೆಫ್ಟಿನಂಟ್ ಗವರ್ನರ್ ಗೆ ನೀಡುತ್ತದೆ ಎಂದರು.
ಲೆಫ್ಟಿನಂಟ್ ಗವರ್ನರ್‌ಗೆ ಎಂಸಿಡಿಗೆ ವಿವಿಧ ಕ್ಷೇತ್ರಗಳ ಗಣ್ಯರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡುವ ಅಧಿಕಾರವಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿದೆ.
ಎಂಸಿಡಿಗೆ 10 ಗಣ್ಯರನ್ನು ನಾಮ ನಿರ್ದೇಶನ ಮಾಡುವಾಗ ಲೆಫ್ಟಿನಂಟ್ ಗವರ್ನರ್ ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸಲು ಬದ್ಧರಾಗಿರುತ್ತಾರೆ ಎಂಬ ದಿಲ್ಲಿ ಸರಕಾರದ ವಾದವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ತಿರಸ್ಕರಿಸಿತು.
ಸುಮಾರು 15 ತಿಂಗಳುಗಳ ಕಾಲ ಕಾಯ್ದಿರಿಸಿದ್ದ ತನ್ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಆಪ್ ಮನವಿಯ ಮೇರಗೆ ಸೋಮವಾರ ಪ್ರಕಟಿಸಿದೆ.
ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯಿಸಿದ ಸಿಂಗ್,ಇದು ಭಾರತದ ಪ್ರಜಾಪ್ರಭುತ್ವಕ್ಕೆ ಬಹು ದೊಡ್ಡ ಹೊಡೆತವಾಗಿದೆ. ಸರ್ವೋಚ್ಚ ನ್ಯಾಯಾಲಯವು ಲೆಫ್ಟಿನಂಟ್ ಗವರ್ನರ್ ಅವರೇ ಸರಕಾರವನ್ನು ನಡೆಸುವಂತಾಗಲು ಚುನಾಯಿತ ಸರಕಾರವನ್ನು ಬೈಪಾಸ್ ಮಾಡಿ ಎಲ್ಲ ಅಧಿಕಾರಗಳನ್ನು ಅವರಿಗೆ ನೀಡಿದೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಒಳ್ಳೆಯದಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದರು.
ಎಂಸಿಡಿ 250 ಚುನಾಯಿತ ಮತ್ತು 10 ನಾಮನಿರ್ದೇಶಿತ ಸದಸ್ಯರನ್ನು ಹೊಂದಿದೆ.