ರೈತರ ಆದಾಯವಲ್ಲ, ಆತ್ಮಹತ್ಯೆಗಳು ದ್ವಿಗುಣಗೊಂಡಿವೆ : ಪ್ರಧಾನಿ ಮೋದಿ ವಿರುದ್ಧ ಶರದ್ ಪವಾರ್ ವಾಗ್ದಾಳಿ
ಶರದ್ ಪವಾರ್ | PC : PTI
ಸೋಲಾಪುರ(ಮಹಾರಾಷ್ಟ್ರ) : ರೈತರಿಗೆ ದ್ವಿಗುಣ ಆದಾಯದ ಭರವಸೆಯನ್ನು ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರವಿವಾರ ತೀವ್ರ ವಾಗ್ದಾಳಿ ನಡೆಸಿದ ಎನ್ ಸಿ ಪಿ(ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಅವರು, ವಾಸ್ತವದಲ್ಲಿ ಬಿಜೆಪಿ ಆಡಳಿತದಲ್ಲಿ ರೈತರ ಆತ್ಮಹತ್ಯೆಗಳು ದ್ವಿಗುಣಗೊಂಡಿವೆ ಎಂದು ಹೇಳಿದರು.
ಸೋಲಾಪುರ ಜಿಲ್ಲೆಯ ಬಾರ್ಶಿ ಪಟ್ಟಣದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಪವಾರ್, ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆಗಳನ್ನು ಪಡೆಯುತ್ತಿಲ್ಲ ಮತ್ತು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದರು,ಬದಲಿಗೆ ರೈತರ ಆತ್ಮಹತ್ಯೆಗಳು ದ್ವಿಗುಣಗೊಂಡಿವೆ ಎಂದು ಹೇಳಿದರು.
ರಾಜ್ಯದಲ್ಲಿಯ ಸರಕಾರವನ್ನು ಬದಲಿಸಿ ರೈತರು, ಯುವಕರು ಮತ್ತು ಮಹಿಳೆಯರ ಹಿತಾಸಕ್ತಿಗಳನ್ನು ರಕ್ಷಿಸುವ ಸರಕಾರವನ್ನು ಸ್ಥಾಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದ ಅವರು, ‘ಕೇಂದ್ರ ಮತ್ತು ರಾಜ್ಯದಲ್ಲಿಯ ಬಿಜೆಪಿ ಸರಕಾರಗಳು ರೈತರ ಸಂಕಷ್ಟಗಳನ್ನು ತಗ್ಗಿಸಲು ಮತ್ತು ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ತಮ್ಮ ಅಧಿಕಾರವನ್ನು ಬಳಸಿಲ್ಲ.ಉದ್ಯೋಗಗಳ ಕೊರತೆಯಿಂದಾಗಿ ಯುವಕರು ಸಂಕಷ್ಟದಲ್ಲಿದ್ದಾರೆ. ನಾವು ಈ ಸರಕಾರವನ್ನು ಬದಲಿಸಲೇಬೇಕಿದೆ ’ ಎಂದರು.