‘ವೋಟಿಗಾಗಿ ನೋಟು’ ಪ್ರಕರಣ | ಡಿಎಂಕೆ ಸಂಸದ ಕದಿರ್ ನಿವಾಸ ಮೇಲೆ ಈಡಿ ದಾಳಿ
ತಂದೆ, ಸಚಿವ ದೊರೈ ಮುರುಗನ್ ನಿವಾಸದಲ್ಲೂ ಶೋಧ
ಡಿ.ಎಂ. ಕದಿರ್ ಆನಂದ್ | PC : PTI
ಚೆನ್ನೈ : 2019ರ ‘ವೋಟಿಗಾಗಿ ನೋಟು’ ಪ್ರಕರಣಕ್ಕೆ ಸಂಬಂಧಿಸಿ ಜಾರಿನಿರ್ದೇಶನಾಲಯವು ಶುಕ್ರವಾರ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಡಿಎಂಕೆ ಸಂಸದ ಡಿ.ಎಂ. ಕದಿರ್ ಆನಂದ್ ಹಾಗೂ ಅವರ ತಂದೆ, ರಾಜ್ಯದ ಡಿಎಂಕೆ ಸರಕಾರದ ಸಚಿವ ದೊರೈ ಮುರುಗನ್ ಅವರಿಗೆ ಸೇರಿದ ಮನೆಗಳು ಮತ್ತು ಇತರ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಕದಿರ್ ಆನಂದ್ ಹಾಗೂ ಅವರ ಸಹಚರರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಮತ್ತು ವೆಲ್ಲೂರಿನಲ್ಲಿ ದೊರೈ ಮುರುಗನ್ ಅವರ ನಿವಾಮೇಲೆ ಜಾರಿ ನಿರ್ದೇಶನಾಲಯದ ತಂಡವು ಶೋಧ ಕಾರ್ಯಾಚರಣೆ ನಡೆಸಿತು.
ಪ್ರಕರಣವೊಂದಕ್ಕೆ ಸಂಬಂಧಿಸಿ 2019ರಲ್ಲಿ ದಾಖಲಾದ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯು ಕದಿರ್ ಆನಂದ್ ಹಾಗೂ ಮುರುಗನ್ ವಿರುದ್ಧ ನೀಡಿದ್ದ ದೂರಿಗೆ ಸಂಬಂಧಿಸಿ ಈ ದಾಳಿಯನ್ನು ನಡೆಸಲಾಗಿದೆ. 2019ರ ಲೋಕಸಭಾ ಚುನಾವಣೆಗೆ ಮುನ್ನ ಕದಿರ್ ಆನಂದ್ ಅವರಿಗೆ ಸಂಬಂಧಪಟ್ಟ ಸ್ಥಗಳಿಂದ ಆದಾಯ ತೆರಿಗೆ ಅಧಿಕಾರಿಗಳು 11.48 ಕೋಟಿ ರೂ.ನಗದನ್ನು ವಶಪಡಿಸಿಕೊಂಡಿದ್ದರು.
2019ರ ಮಾರ್ಚ್ನಲ್ಲಿ ಡಿಎಂಕೆ ಅಭ್ಯರ್ಥಿ ಕದಿರ್ ಆನಂದ್ ಅವರಿಗೆ ಸೇರಿದ ಸ್ಥಳಗಳಿಂದ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಮಾಹಿತಿಯನ್ನು ಆಧರಿಸಿ ಆಕ್ರಮ ಹಣದ ಇನ್ನೊಂದು ಭಾಗವನ್ನು ಅವರ ಪುತ್ರ ಹಾಗೂ ಆಗ ಡಿಎಂಕೆ ಖಜಾಂಚಿಯಾಗಿದ್ದ ದೊರೈಮುರುಗನ್ ಮಾಲಕತ್ವದ ಕಾಲೇಜ್ನಿಂದ ಅವರದೇ ಕುಟುಂಬಕ್ಕೆ ಸೇರಿದ ಸಿಮೆಂಟ್ ಗೋದಾಮಿಗೆ ವರ್ಗಾಯಿಸಲಾಗಿತ್ತು. ಅಲ್ಲಿಯೂ ದಾಳಿ ನಡೆಸಿದ ಬಳಿಕ ಚುನಾವಣಾ ಆಯೋಗವು ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದುಪಡಿಸಿತ್ತು.