ಅಂತರ್ಧರ್ಮೀಯ ವಿವಾಹಗಳಲ್ಲಿ ಯಾವುದೇ ತಪ್ಪಿಲ್ಲ, ಆದರೆ ಮೋಸದ ಮದುವೆಗಳನ್ನು ತಡೆಯಬೇಕು: ಮಹಾರಾಷ್ಟ್ರ ಸಿಎಂ ಫಡ್ನವೀಸ್

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ (PTI)
ನಾಗ್ಪುರ: ಅಂತರ್ಧರ್ಮೀಯ ವಿವಾಹಗಳಲ್ಲಿ ಯಾವುದೇ ತಪ್ಪಿಲ್ಲ, ಆದರೆ ವಂಚನೆ ಮತ್ತು ಸುಳ್ಳು ಮಾಹಿತಿ ನೀಡಿ ಮದುವೆಯಾಗುವುದರ ವಿರುದ್ಧ ಕ್ರಮ ಕೆಗೊಳ್ಳಬೇಕು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ʼಲವ್ ಜಿಹಾದ್ʼ ನ ವಾಸ್ತವದ ಬಗ್ಗೆ ಅವಲೋಕನಗಳನ್ನು ಮಾಡಿವೆ ಎಂದು ಹೇಳಿದರು.
ಬಲವಂತದ ಮತಾಂತರ ಮತ್ತು "ಲವ್ ಜಿಹಾದ್" ಪ್ರಕರಣಗಳ ವಿರುದ್ಧ ನೂತನ ಕಾನೂನು ರೂಪಿಸಲು, ಕಾನೂನು ಅಂಶಗಳನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ ಸಮಿತಿಯನ್ನು ಸ್ಥಾಪಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಫಡ್ನವೀಸ್ ಪ್ರತಿಕ್ರಿಯಿಸುತ್ತಿದ್ದರು.
"ಮಹಾರಾಷ್ಟ್ರದಲ್ಲಿ ವಂಚಿಸಿ ಮದುವೆಯಾಗಿ, ಮಕ್ಕಳು ಜನಿಸಿದ ನಂತರ ಕೈಬಿಡುವ ಘಟನೆಗಳು ಹೆಚ್ಚುತ್ತಿವೆ. ಇದು ವಾಸ್ತವ", ಎಂದು ಫಡ್ನವೀಸ್ ಹೇಳಿದರು.
ಅಂತರ್ಧರ್ಮೀಯ ವಿವಾಹಗಳಲ್ಲಿ ಯಾವುದೇ ತಪ್ಪಿಲ್ಲ, ಆದರೆ ನಕಲಿ ಗುರುತಿನ ಚೀಟಿಗಳನ್ನು ಬಳಸುವುದು ಮತ್ತು ವಂಚನೆ ಮಾಡುವ ಪ್ರಕರಣಗಳು ಗಂಭೀರವಾಗಿದ್ದು, ಅವುಗಳನ್ನು ತಡೆಯಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ನೇತೃತ್ವದ ಸಮಿತಿಯು "ಲವ್ ಜಿಹಾದ್" ಮತ್ತು ಬಲವಂತದ ಮತಾಂತರದ ಕುರಿತ ದೂರುಗಳನ್ನು ನಿಭಾಯಿಸಲು ಕ್ರಮಗಳನ್ನು ಸೂಚಿಸಲಿದೆ ಎನ್ನುವ ನಿರ್ಣಯವನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದೆ.